ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಶಫಿ ದರಾಶಾ ಪಂದ್ಯಾವಳಿಯ ನಾಲ್ಕನೇ ದಿನ ಹೆಚ್ಚು ಕಡಿಮೆ ಎಲ್ಲ ಪಂದ್ಯಗಳೂ ಮಳೆಗೆ ಆಹುತಿಯಾಗಿವೆ. ಆಲೂರಿನಲ್ಲಿ ನಡೆದ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮತ್ತು ಕೆಎಸ್ಸಿಎ ಇಲೆವೆನ್ ನಡುವೆ ನಡೆದ ಪಂದ್ಯವನ್ನು ಮಳೆಯ ಕಾರಣ ಶನಿವಾರ 2:30ಕ್ಕೆ ನಿಲ್ಲಿಸಲಾಯಿತು. ಕೆಎಸ್ಸಿಎ 3 ಅಂಕ ಪಡೆದರೆ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆ 1 ಅಂಕ ಪಡೆದುಕೊಂಡಿದೆ.
ಇನ್ನು ಆಲೂರಿನಲ್ಲಿ ನಡೆದ 2ನೇ ಪಂದ್ಯದಲ್ಲಿ ಕೆಎಸ್ಸಿಎ ಪ್ರೆಸಿಡೆಂಟ್ ಇಲೆವೆನ್ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ನಡುವಿನ ಪಂದ್ಯವನ್ನು ನಾಲ್ಕನೇ ದಿನ ಮಳೆಯ ಕಾರಣ ರದ್ದುಪಡಿಸಲಾಯಿತು. ಪಂದ್ಯದಲ್ಲಿ ಕೆಎಸ್ಸಿಎ ಪ್ರೆಸಿಡೆಂಟ್ ಇಲೆವೆನ್ 3 ಅಂಕ ಪಡೆದರೆ, ಬಂಗಾಳ ಕ್ರಿಕೆಟ್ ಸಂಸ್ಥೆ 1 ಅಂಕ ಪಡೆಯಿತು.
ಇನ್ನು ಹರ್ಯಾಣ ಕ್ರಿಕೆಟ್ ಸಂಸ್ಥೆಯ ಮತ್ತು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ನಡುವೆ ನಡೆದ ಪಂದ್ಯ ಸಹ ಮಳೆಯಿಂದ ರದ್ದಾಯಿತು. ಪಂದ್ಯದಲ್ಲಿ ಹರ್ಯಾಣ ಕ್ರಿಕೆಟ್ ಸಂಸ್ಥೆ 3 ಅಂಕ ಪಡೆದರೆ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ 1 ಅಂಕ ಪಡೆಯಿತು.
ಕೇರಳಕ್ಕೆ ಜಯ: ಬಿಜಿಎಸ್ ಮೈದಾನಲ್ಲಿ ತ್ರಿಪುರಾ ಕ್ರಿಕೆಟ್ ಸಂಸ್ಥೆ ಮತ್ತು ಕೇರಳ ಕ್ರಿಕೆಟ್ ಸಂಸ್ಥೆ ನಡೆದ ಪಂದ್ಯದಲ್ಲಿ ಮಾತ್ರ ಫಲಿತಾಂಶ ಹೊರಬಿದ್ದಿದೆ. ಪಂದ್ಯದಲ್ಲಿ 10 ವಿಕೆಟ್ ಅಂತರದಿಂದ ಜಯ ಸಾಧಿಸಿದ ಕೇರಳ ತಂಡ ಒಂದು ಬೋನಸ್ ಅಂಕದೊಂದಿಗೆ ಒಟ್ಟು 6 ಅಂಕ ಪಡೆದಿದೆ. ಸೋಲನುಭವಿಸಿದ ತ್ರಿಪುರಾ ಕ್ರಿಕೆಟ್ ಸಂಸ್ಥೆಗೆ ಯಾವುದೇ ಅಂಕ ದೊರಕಿಲ್ಲ.
ಕೆಎಸ್ಸಿಎ ಕೋಲ್ಟ್ಸ್ ಮತ್ತು ಒಡಿಶಾ ಕ್ರಿಕೆಟ್ ಸಂಸ್ಥೆ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಸಹ 4ನೇ ದಿನ ಸಂಜೆ 4 ಗಂಟೆಗೆ ರದ್ದುಪಡಿಸಲಾಯಿತು. ಒಡಿಶಾ ಕ್ರಿಕೆಟ್ ಸಂಸ್ಥೆ 3 ಅಂಕ ಪಡೆದರೆ, ಕೆಎಸ್ಸಿಎ ಕೋಲ್ಟ್ಸ್ 0 ಅಂಕ ಪಡೆದುಕೊಂಡಿದೆ.
ಆದಿತ್ಯ ಗ್ಲೋಬಲ್ ಮೈದಾನಲ್ಲಿ ಗೋವಾ ಕ್ರಿಕೆಟ್ ಸಂಸ್ಥೆ ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ನಡುವೆ ನಡೆದ ಪಂದ್ಯವನ್ನು ಮಳೆಯ ಕಾರಣ 4ನೇ ದಿನ ಸಂಪೂರ್ಣವಾಗಿ ರದ್ದುಪಡಿಸಲಾಯಿತು. ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಂಡವು.
ಇನ್ನು ಮೈಸೂರಿನ ಎಸ್ಜೆಸಿಇ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮತ್ತು ಆಂಧ್ರ ಕ್ರಿಕೆಟ್ ಸಂಸ್ಥೆ ನಡುವೆ ನಡೆದ ಪಂದ್ಯದಲ್ಲಿ ಆಂಧ್ರ ತಂಡ 3 ಅಂಕ ಗಳಿಸಿದರೆ, ಆಸ್ಸಾಂ 1 ಅಂಕ ಗಳಿಸಿತು.
ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಬರೋಡಾ ಕ್ರಿಕೆಟ್ ಸಂಸ್ಥೆ ಮತ್ತು ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ತಂಡಗಳ ನಡುವೆ ನಡೆದ ಇನ್ನೊಂದು ಪಂದ್ಯದಲ್ಲಿ ಬರೋಡಾ ಮೇಲುಗೈ ಸಾಧಿಸಿತು. ಬರೋಡಾ 3 ಅಂಕ ಗಳಿಸಿದರೆ, ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ತಂಡ 1 ಅಂಕ ಗಳಿಸಿತು.