ಕಂಚಿನ ಪದಕ ಗೆದ್ದ ಭಾರತ ತಂಡ

Updated on: 

ಕೋಲ್ಕತಾ: ನಿರೀಕ್ಷೆಯಂತೆ ಭಾರತ ಪುರುಷರ ಆರ್ಚರಿ ತಂಡ ಕೊಲೊಂಬಿಯಾದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ 3ನೇ ಹಂತದ ಪಂದ್ಯಾವಳಿಯ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.
ರಜತ್ ಚೌಹಣ್, ಸಂದೀಪ್ ಕುಮಾರ್ ಹಾಗೂ ರತನ್ ಸಿಂಗ್ ಖುರೈಜಮ್ ಅವರನ್ನೊಳಗೊಂಡ ಭಾರತ ಪುರುಷರ ತಂಡ ಅತಿಥೇಯ ತಂಡ ನೀಡಿದ ತೀವ್ರ ಪೈಪೋಟಿ ಮಧ್ಯೆ, 215-210 ಅಂಕಗಳ ಅಂತರದಿಂದ ಜಯ ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿತು.
ಮಹಿಳೆಯರ ರಿಕರ್ವ್ ವಿಭಾಗದಲ್ಲಿ ದೀಪಿಕಾ ಕುಮಾರಿ, ಲೈಶ್ರಮ್ ಬೊಂಬೆಲಾ ದೇವಿ ಮತ್ತು ರಿಮಿಲ್ ಬಿರುಲಿ ಅವರನ್ನೊಳಗೊಂಡ ಭಾರತ ತಂಡ, ಅಗ್ರ ಶ್ರೇಯಾಂಕ ಪಡೆದಿರುವ ಚೀನಾದ ವಿರುದ್ಧ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇದೆ.
ರಿಕರ್ವ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ತಂಡ ಇನ್ನೊಂದು ಪದಕ ಗೆಲ್ಲುವ ಅವಕಾಶ ಹೊಂದಿದೆ. ಅತನು ದಾಸ್ ಮತ್ತು ದೀಪಿಕಾ ಅವರನ್ನೊಳಗೊಂಡ ಭಾರತ ತಂಡ, ಮಿಶ್ರ ತಂಡ ವಿಭಾಗದಲ್ಲಿ ಮೆಕ್ಸಿಕೋ ತಂಡದ ವಿರುದ್ಧ ಪ್ಲೆ ಆಫ್ ಪಂದ್ಯದಲ್ಲಿ ಹೋರಾಟ ನಡೆಸಲಿದೆ.
ಕಂಚಿನ ಪದಕಕ್ಕಾಗಿ ನಡೆದ ಪುರುಷರ ಕಾಂಪೌಂಡ್ ಹೋರಾಟ ಗಾಳಿ ಬೀಸುತ್ತಿದ್ದ ಕಠಿಣ ಸ್ಥಿತಿಯಲ್ಲಿ ನಡೆಯಿತು. ಕೊಲಂಬಿಯಾ ತಂಡಕ್ಕೆ ತವರಿನ ಅಭಿಮಾನಿಗಳು ಭಾರೀ ಬೆಂಬಲ ಸೂಚಿಸಿದರು. ಆದರೆ ವಿಚಲಿತಗೊಳ್ಳದ ಭಾರತ ತಂಡ ಮೇಲುಗೈ ಸಾಧಿಸಿತು.
ಆರಂಭದಿಂದ ತೀವ್ರ ಪೈಪೋಟಿ ಒಡ್ಡಿದ ಭಾರತ ತಂಡ ಮೊದಲ ಸುತ್ತಿನಲ್ಲಿ 52-50 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಆದರೆ, ದ್ವಿತೀಯ ಸುತ್ತಿನಲ್ಲಿ ಆತಿಥೇಯ ಕೊಲಂಬಿಯಾ ಮುನ್ನಡೆ ಕಂಡುಕೊಂಡಿತು.
ಕೊಲಂಬಿಯಾ 54 ಅಂಕಗಳನ್ನು ಗಳಿಸಿಕೊಂಡರೆ, ಭಾರತ ಕೇವಲ 50 ಅಂಕ ಪಡೆಯಿತು. ಹೀಗಾಗಿ ಆತಿಥೇಯ ತಂಡ 104-102 ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.
ಮೂರನೇ ಸುತ್ತಿನಲ್ಲಿ ಭಾರತ 56 ಅಂಕಗಳಿಸುವ ಮೂಲಕ 158-156 ಅಂಕಗಳೊಂದಿಗೆ ಮುನ್ನಡೆ ಪಡೆದುಕೊಂಡಿತು.
ನಂತರ ತಿರುಗಿ ನೋಡ ಭಾರತ ತಂಡ ಫೈನಲ್ ಸುತ್ತಿನಲ್ಲಿ 57 ಅಂಕ ಪಡೆಯುವ ಮೂಲಕ ಅತಿಥೇಯ ಕೊಲಂಬಿಯಾ ವಿರುದ್ಧ ಮೊದಲ ವಿಶ್ವಕಪ್ ಪದಕ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತು.
2008ರ ನಂತರ ಇದೇ ಮೊದಲ ಬಾರಿಗೆ ಫ್ರಾನ್ಸ್ನ ಪುರುಷರ ತಂಡ ಪಂದ್ಯಾವಳಿಯ ಪುರುಷರ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com