ಕಠ್ಮಂಡು: ನಿರ್ಭೀತ ಪ್ರದರ್ಶನ ನೀಡಿದ ಭಾರತದ ಹದಿನಾರು ವರ್ಷದೊಳಗಿನ ಫುಟ್ಬಾಲ್ ತಂಡ, 16 ವರ್ಷದೊಳಗಿನ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 4-1 ಗೋಲುಗಳ ಅಂತರದಿಂದ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಪಂದ್ಯಾವಳಿಯ ಬಿ ಗುಂಪಿನಲ್ಲಿರುವ ಭಾರತ ತಂಡವನ್ನು ಎಐಎಫ್ಎಫ್ ಪ್ರಾದೇಶಿಕ ಅಡಾಮಿಯ 15 ವರ್ಷದೊಳಗಿನ ತಂಡದ ಆಟಗಾರರು ಭಾಗವಹಿಸಿದ್ದಾರೆ.
ಪಂದ್ಯದ 21 ನಿಮಿಷದಲ್ಲಿ ಕೃಷ್ಣ ಪಂಡೀತ್ ಮೊದಲ ಗೋಲು ದಾಖಲಿಸುವ ಮೂಲಕ ಭಾರತ ಗೋಲು ಖಾತೆ ತೆರೆಯಿತು. ನಂತರ 23ನೇ ನಿಮಿಷದಲ್ಲಿ ಸ್ಟ್ರೈಕರ್ ಬೆದಶ್ವರ್ ಸಿಂಗ್ ಅವರು ಗೋಲು ದಾಖಲಿಸಿದರು. ಹೀಗಾಗಿ ಭಾರತ ಮೊದಲಾರ್ಧ ಪಂದ್ಯದಲ್ಲಿ 2 ಗೋಲು ದಾಖಲಿಸಿತ್ತು. ನಂತರ ದ್ವಿತೀಯಾರ್ಧ ಪಂದ್ಯದ 66ನೇ ನಿಮಿಷದಲ್ಲಿ ಪ್ರೊಸೆಂಜಿತ್ ಚಕ್ರವರ್ತಿ ಮತ್ತೊಂದು ಗೋಲು ದಾಖಲಿಸಿದರು. ನಂತರ 88ನೇ ನಿಮಿಷದಲ್ಲಿ ಬೆದೆಶ್ವರ ಸಿಂಗ್ ಮತ್ತೊಂದು ಗೋಲು ದಾಖಲಿಸಿದರು.
ಆರಂಭದಿಂದ ಅಂತ್ಯದವರೆಗೂ ಆಕರ್ಷಕ ಪ್ರದರ್ಶನ ನೀಡಿದ ಗೌತಮ್ ಘೋಷ್ ತರಬೇತಿ ನೀಡಿರುವ ಭಾರತ ತಂಡ, ಎದುರಾಳಿ ತಂಡಕ್ಕೆ ಬಲಿಷ್ಠ ಪ್ರದರ್ಶನ ನೀಡಿತು. ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ತಂಡ ಮೂರು ಅಂಕಗಳನ್ನು ಗಳಿಸಿಕೊಂಡಿದೆ.
'ಫಲಿತಾಂಶ ಮುಖ್ಯವಲ್ಲ. ಪಂದ್ಯದಲ್ಲಿ ನಾವು ನಮ್ಮ ತತ್ವಕ್ಕೆ ಬದ್ಧರಾಗಿರಬೇಕಾಗಿತ್ತು. ನಮ್ಮ ಬಾಲಕರು ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನ ನೀಡಿದ್ದು ಸಂತಸ ನೀಡಿತು. ಪಂದ್ಯದಲ್ಲಿ ನಾವು ಶೇ.75ರಷ್ಟು ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿದ್ದೆವು. ಆದರೆ, ಎದುರಾಳಿ ಲಂಕಾ ತಂಡ ರಕ್ಷಣಾತ್ಮಕ ತಂತ್ರವನ್ನು ಮಾತ್ರ ಅನುಸರಿಸಿತು. ಇನ್ನೂ ಕೆಲ ವಿಭಾಗಗಳಲ್ಲಿ ನಾನು ಚೇತರಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಪಂದ್ಯದ ವಿಡಿಯೋ ತುಣುಗಳನ್ನು ನೋಡುತ್ತಿದ್ದೇವೆ' ಎಂದು ಘೋಷ್ ಹೇಳಿದರು.
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶವನ್ನು ಎದುರಿಸಲಿದೆ.