ಬೆಂಗಳೂರು: ಅಗ್ರ ನಾಲ್ಕು ವಿಕೆಟ್ ಕಳೆದುಕೊಂಡ ಗೋವಾ ಕ್ರಿಕೆಟ್ ಸಂಸ್ಥೆ ಶಫಿ ದರಾಶಾ ಟ್ರೋಫಿಯ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಸ್ಸಿಎ ಇಲೆವೆನ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. 38 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಗೋವಾ ಬುಧವಾರ ದಿನಾಂತ್ಯಕ್ಕೆ 153 ರನ್ ಕಲೆ ಹಾಕಿದೆ. ಗೋವಾದ ರವಿಕಾಂತ್ ಶುಕ್ಲಾ (ಅಜೇಯ 70) ಮತ್ತು ದರ್ಶನ್ ಮಿಸಾಲ್ (ಅಜೇಯ 36) ದಿನಾಂತ್ಯಕ್ಕೆ ಕ್ರೀಸ್ನಲ್ಲಿದ್ದರು.
ಅಭಿಮನ್ಯು ಮಿಥುನ್, ಎಚ್.ಎಸ್ ಶರತ್ ಹಾಗೂ ಎಸ್.ಎಲ್ ಅಕ್ಷಯ್ ಅವರು ಕೆಎಸ್ಸಿಎ ಇಲೆವೆನ್ ಪರ ತಲಾ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ದಿನದ ಆಟ ಆರಂಭಿಸಿದ ಕೆಎಸ್ಸಿಎ ಇಲೆವೆನ್ ತಂಡ, ಪಂದ್ಯದ ಎರಡನೇ ದಿನವಾದ ಬುಧವಾರ ತನ್ನ ಮೊದಲ ಇನಿಂಗ್ಸ್ನ 120 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 527 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಮನೀಶ್ ಪಾಂಡೆ (ಅಜೇಯ 87), ಅಮಿತ್ ವರ್ಮಾ (54) ಹಾಗೂ ಅಭಿಮನ್ಯು ಮಿಥುನ್ (58) ಅವರು ದಾಖಲಿಸಿದ ಅರ್ಧ ಶತಕಗಳು ಕೆಎಸ್ಸಿಎ ಇಲೆವೆನ್ ತಂಡ ಈ ಬೃಹತ್ ಮೊತ್ತ ದಾಖಲಿಸಲು ನೆರವಾಯಿತು.
ಗೋವಾ ಪರ ಅಕರ್ಷಕ ಬೌಲಿಂಗ್ ಪ್ರದರ್ಶಿಸಿದ ಸಯ್ಯದ್ ಬದ್ಯೂಜ್ಜಮ್ಮಾ 67 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಅಮಿತ್ ಯಾದವ್ 119 ರನ್ ನೀಡಿ 1 ವಿಕೆಟ್ ಪಡೆದರು.
ಆದಿತ್ಯ ಗ್ಲೋಬಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ವಿರುದ್ಧ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ 298 ರನ್ಗಳಿಗೆ ಆಲೌಟ್ ಆಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ 2ನೇ ದಿನಾಂತ್ಯಕ್ಕೆ 64 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ.
ಆಲೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೆಎಸ್ಸಿಎ ಕೋಲ್ಟ್ಸ್ ತಂಡ 107.3 ಓವರ್ಗಳಲ್ಲಿ 295 ರನ್ಗಳಿಗೆ ಆಲೌಟ್ ಆಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡ ದಿನಾಂತ್ಯಕ್ಕೆ 77 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 323 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಕೆಎಸ್ಸಿಎ ಕೋಲ್ಟ್ಸ್ ತಂಡದ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಅಬ್ರಾರ್ ಖಾಜಿ 41 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಸಂಜಯ್ ರಂಜನ್ ಕುಮಾರ್ 30 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಆಲೂರಿನಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ ತ್ರಿಪುರಾ ಕ್ರಿಕೆಟ್ ಸಂಸ್ಥೆ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 359 ರನ್ಗಳಿಗೆ ಆಲೌಟ್ ಆಯಿತು. ನಂತರ ಇನಿಂಗ್ಸ್ ಆರಂಭಿಸಿದ ತ್ರಿಪುರಾ ದಿನಾಂತ್ಯಕ್ಕೆ 63 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ.
ಆಲೂರಿನಲ್ಲೇ ನಡೆಯುತ್ತಿರುವ 3ನೇ ಪಂದ್ಯದಲ್ಲಿ ಮೊದಲ ದಿನ ಮಂಗಳವಾರವೇ ಹರ್ಯಾಣ ಕ್ರಿಕೆಟ್ ಸಂಸ್ಥೆ ವಿರುದ್ಧ 194 ರನ್ಗಳಿಗೆ ಆಲೌಟ್ ಆಗಿದ್ದ ಒಡಿಶಾ ಕ್ರಿಕೆಟ್ ಸಂಸ್ಥೆ, ಬುಧವಾರ ಹರ್ಯಾಣವನ್ನು 274 ರನ್ಗಳಿಗೆ ಆಲೌಟ್ ಮಾಡಿತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿ ದಿನಾಂತ್ಯಕ್ಕೆ 30 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದೆ.
ಬಿಜಿಎಸ್ ಮೈದಾನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇರಳ ಕ್ರಿಕೆಟ್ ಸಂಸ್ಥೆ ಕೆಎಸ್ಸಿಎ ಪ್ರೆಸಿಡೆಂಟ್ ಇಲೆವೆನ್ ತಂಡದ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 388 ರನ್ ಕಲೆ ಹಾಕಿತು. ನಂತರ ಇನಿಂಗ್ಸ್ ಆರಂಭಿಸಿದ ಕೆಎಸ್ಸಿಎ ಪ್ರೆಸಿಡೆಂಟ್ ಇಲೆವೆನ್ ತಂಡ ದಿನಾಂತ್ಯಕ್ಕೆ 59 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ.
ಮೈಸೂರಿನ ಎಸ್ಜೆಸಿಇ ಎಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ತಂಡ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ 119 ಓವರ್ಗಳಲ್ಲಿ 9 ವಿಕೆಟ್ಗೆ 479 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ನಂತರ ಇನಿಂಗ್ಸ್ ಆರಂಭಿಸಿದ ಆಂಧ್ರ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ. ಮಳೆ ಅಡ್ಡಿಯಿಂದ ಪಂದ್ಯವನ್ನು ಮೊದಲ ದಿನವಾದ ಮಂಗಳವಾರ ಮಧ್ಯಾಹ್ನ 2:30ಕ್ಕೆ ನಿಲ್ಲಿಸಲಾಗಿತ್ತು.
ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಸ್ಸಾಂ ಕ್ರಿಕೆಟ್ ಸಂಸ್ಥೆ, ಬರೋಡಾ ಕ್ರಿಕೆಟ್ ಸಂಸ್ಥೆ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 74.2 ಓವರ್ಗಳಲ್ಲಿ 222 ರನ್ಗಳಿಗೆ ಆಲೌಟ್ ಆಯಿತು. ನಂತರ ಇನಿಂಗ್ಸ್ ಆರಂಭಿಸಿದ ಬರೋಡಾ ದಿನಾಂತ್ಯಕ್ಕೆ 45.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.