ಬೆಂಗಳೂರು: ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡದ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ತ್ರಿಪುರ ಕ್ರಿಕೆಟ್ ಸಂಸ್ಥೆ, ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಶಫಿ ದರಾಶಾ ಟ್ರೋಫಿಯ ಮೂರನೇ ಹಂತದ ಮೊದಲ ದಿನವಾದ ಸೋಮವಾರ 194 ರನ್ಗಳಿಗೆ ಆಲೌಟ್ ಆಯಿತು.
ಎನ್. ಇರುಪಮ್ಸೆನ್ (94) ಮಾತ್ರ ತ್ರಿಪುರ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಮೊತ್ತದಲ್ಲಿ 10 ಬೌಂಡರಿಗಳು ಸೇರಿದ್ದವು. ಅಧ್ಯಕ್ಷರ ಇಲೆವೆನ್ ಪರ ಆಕರ್ಷಕ ಬೌಲಿಂಗ್ ದಾಳಿ ನಡೆಸಿದ ಸ್ಟಾಲಿನ್ ಹೂವರ್ 48 ರನ್ ನೀಡಿ 4 ವಿಕೆಟ್ ಕಬಳಿಸಿದರು. ರೋನಿತ್ ಮೋರೆ, ಮೋಯಿನುದ್ದೀನ್ ಹಾಗೂ ಸುನಿಲ್ ರಾಜು ತಲಾ 2 ವಿಕೆಟ್ ಪಡೆದರು.
ನಂತರ ಇನಿಂಗ್ಸ್ ಆರಂಭಿಸಿದ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ ದಿನಾಂತ್ಯಕ್ಕೆ 18 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ. ಸಮರ್ಥ್ ಆರ್ (ಅಜೇಯ 31) ಕ್ರೀಸ್ನಲ್ಲಿದ್ದರೆ, ಲಿಯಾನ್ ಖಾನ್ (31) ವಿಕೆಟ್ ಒಪ್ಪಿಸಿದರು.
ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ತಂಡ ಒಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧ 266 ರನ್ಗಳಿಗೆ ಆಲೌಟ್ ಆಗಿದೆ. ಒಡಿಶಾ ಪರ ಅಲೋಕ್ ಮಂಗರಾಜ್ 3 ವಿಕೆಟ್ ಪಡೆದರು.
ಇನ್ನು ಆಲೂರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ತಂಡ ಕೆಎಸ್ಸಿಎ ಇಲೆವೆನ್ ವಿರುದ್ಧ 234 ರನ್ಗಳಿಗೆ ಆಲೌಟ್ ಆಯಿತು. ಕೆಎಸ್ಸಿಎ ಇಲೆವೆನ್ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಕೆ.ಪಿ ಅಪ್ಪಣ್ಣ 42 ರನ್ ನೀಡಿ 4 ವಿಕೆಟ್ ಪಡೆದರು. ಎಸ್.ಎಲ್ ಅಕ್ಷಯ್ 34 ರನ್ ನೀಡಿ 3 ವಿಕೆಟ್ ಪಡೆದರೆ, ಕೆ. ಗೌತಮ್ 36 ರನ್ ನೀಡಿ 2 ವಿಕೆಟ್ ಪಡೆದರು.
ಆಲೂರಿನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಎಸ್ಸಿಎ ಕೋಲ್ಟ್ಸ್ ತಂಡ, ಹರ್ಯಾಣ ಕ್ರಿಕೆಟ್ ಸಂಸ್ಥೆ ವಿರುದ್ಧ ದಿನಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿದೆ. ಶತಕ ಸಿಡಿಸಿದ ಅಭಿಷೇಕ್ ರೆಡ್ಡಿ (133) ತಂಡಕ್ಕೆ ನೆರವಾದರು. ಹರ್ಯಾಣ ಪರ ಹರ್ಷಲ್ ಪಟೇಲ್ ಮತ್ತು ಜಯಂತ್ ಯಾದವ್ ತಲಾ 2 ವಿಕೆಟ್ ಪಡೆದರು.
ಆಲೂರಿನಲ್ಲಿ ನಡೆಯುತ್ತಿರುವ 3ನೇ ಪಂದ್ಯದಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ತಂಡ ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧ ದೊಡ್ಡ ಮೊತ್ತದತ್ತ ಸಾಗಿದೆ. ಮೊದಲ ದಿನಾಂತ್ಯಕ್ಕೆ ಬಂಗಾಳ ತಂಡ 101 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ. ಶತಕ ಸಿಡಿಸಿದ ಸುದೀಪ್ ಚಟರ್ಜಿ (124) ಬಂಗಾಳ 300 ರನ್ಗಳ ಗಡಿ ದಾಟಲು ನೆರವಾದರು.
ಬಿಜಿಎಸ್ ಮೈದಾನಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಗೋವಾ ಕ್ರಿಕೆಟ್ ಸಂಸ್ಥೆಯ ತಂಡ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ವಿರುದ್ಧ ದಿನಾಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 283 ರನ್ ಗಳಿಸಿದೆ.
ಇನ್ನು ಮೈಸೂರಿನ ಎಸ್ಜೆಸಿಇ ಕಾಲೇಜ್ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಸಾಂ ಕ್ರಿಕೆಟ್ ಸಂಸ್ಥೆಯ ತಂಡ ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ತಂಡದ ವಿರುದ್ಧ 314 ರನ್ಗಳಿಗೆ ಆಲೌಟ್ ಆಯಿತು. ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಜೆ. ಸುಚಿತ್ ಅವರು 84 ರನ್ ನೀಡಿ 5 ವಿಕೆಟ್ಗಳ ಗೊಂಚಲು ಪಡೆದರು.
ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬರೋಡಾ ಕ್ರಿಕೆಟ್ ಸಂಸ್ಥೆಯ ತಂಡ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ದಿನಾಂತ್ಯಕ್ಕೆ 96 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿದೆ.