ಲಾಹೋರ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸೋಲಿನ ಸುಳಿಯಲ್ಲಿ ಸಿಕ್ಕಿ ಪರದಾಡಿದ್ದ ಪಾಕಿಸ್ತಾನ ತಂಡ, ಈ ಪ್ರವಾಸದ ಕಹಿ ಅನುಭವಗಳಿಂದ ಪಾಠ ಕಲಿಯುವ ವಿಶ್ವಾಸ ವ್ಯಕ್ತಪಡಿಸಿದೆ. ಪಾಕ್ನ ಟಿ20 ನಾಯಕ ಮಹಮದ್ ಹಫೀಜ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಅನುಭವಗಳು ಮುಂಬರುವ ಸರಣಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವೇಗದ ಪಿಚ್ಗಳಲ್ಲಿ ಹರಿಣಗಳ ವೇಗದ ಬೌಲರ್ಗಳನ್ನು ಎದುರಿಸಿದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ತಂಡದ ಪ್ರದರ್ಶನ ಉತ್ತಮವಾಗಲಿದೆ ಎಂದು ಹಫೀಜ್ ತಿಳಿಸಿದರು. ನಾವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಸೋತ ರೀತಿ ಬೇಸರ ತಂದಿದೆ. ಆದರೆ ನಾವು ಟಿ20 ಸರಣಿಯಲ್ಲಿ ಮರು ಹೋರಾಟ ನಡೆಸಿದೆವು ಹಾಗೂ ಏಕದಿನ ಸರಣಿಯಲ್ಲಿ ಧನಾತ್ಮಕ ಪ್ರದರ್ಶನವನ್ನು ತೋರಿದೆವು. ಈ ರೀತಿಯ ಕಠಿಣ ಸರಣಿಯಿಂದ ಉತ್ತಮ ಅನುಭವ ಪಡೆದಿದ್ದು, ನಾವು ಮುಂದಿನ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯವಾಗಲಿದೆ ಎಂದರು.