

ವಿಶ್ವದ ಇತರೆ ರಾಷ್ಟ್ರಗಳಲ್ಲಿ ಕುಸ್ತಿ ಎಲ್ಲ ಕ್ರೀಡೆಗಳಂತೆ ಒಂದು. ಆದರೆ, ಆಫ್ರಿಕಾ ಖಂಡದ ಗಾಂಬಿಯಾ ದೇಶಕ್ಕೆ ರಾಷ್ಟ್ರೀಯ ಕ್ರೀಡೆ. ಅಷ್ಟಕ್ಕೂ ಗಾಂಬಿಯನ್ನರ ಪಾಲಿಗೆ ಕುಸ್ತಿ ಕ್ರೀಡೆ ಮಾತ್ರವಲ್ಲ. ಅದು ಅವರ ಉಸಿರು, ಪ್ರಾಣ. ಅಲ್ಲಿನ ಪರಂಪರೆ, ಕಲೆ, ಸಂಸ್ಕೃತಿಯೂ ಹೌದು.
ಪ್ರಪಂಚದ ವಿವಿಧೆಡೆ ಕುಸ್ತಿಯನ್ನು ವಿವಿಧ ರೀತಿಯಲ್ಲಿ ಆಯೋಜಿಸುತ್ತಾರೆ. ಗಾಂಬಿಯಾ ಕುಸ್ತಿಯ ಶೈಲಿ ಮಾತ್ರ ವಿಭಿನ್ನವಾಗಿ ನಿಲ್ಲುತ್ತದೆ. ಇಲ್ಲಿನ ನಗರಗಳ ಹೊರವಲಯದಲ್ಲಿ ಅದಕ್ಕೆಂದೇ ಮರಳಿನ ಅಖಾಡ ಸಿದ್ಧಗೊಂಡಿರುತ್ತವೆ. ಒಂದು ಹಳ್ಳಿಯ ಹೈದ ಮತ್ತೊಂದು ಹಳ್ಳಿಯ ಹೈದನೊಂದಿಗೆ ಕೈ ಮಿಸಲಾಯಿಸುತ್ತಾನೆ. ಎರಡು ಹಳ್ಳಿಗಳು ಎದುರಾದವೆಂದರೆ ಎರಡು ಹಳ್ಳಿಯ ಶೌರ್ಯ, ಗೌರವ, ಪ್ರತಿಷ್ಠೆಗಳು ಕಣಕ್ಕಿಳಿದಂತೆಯೇ ಅರ್ಥ.
ಏಕಕಾಲದಲ್ಲಿ ಅನೇಕ ದೃಶ್ಯಾವಳಿ
ಅಖಾಡದ ಸುತ್ತಲೂ ಕಿಕ್ಕಿರಿದ ಜನಸಾಗರ. ಒಂದು ಬದಿಯಲ್ಲಿ ಆಫ್ರಿಕದ ಸಾಂಪ್ರದಾಯಿಕ ಡೋಲು, ತಮಟೆ ವಾದ್ಯಗಳ ಮೇಳ. ಜೊತೆಗೆ ಸಂಗೀತಗಾರರು, ನೃತ್ಯಗಾರರು. ಇವೆರೆಲ್ಲರ ಮಧ್ಯ ಅತ್ತ ಅಂಡರ್ವೇರನಷ್ಟು ಚಿಕ್ಕದಲ್ಲದ ಮತ್ತು ಕೌಪೀನದಷ್ಚು ದೊಡ್ಡದಲ್ಲದ ವಿಶಿಷ್ಟ ಉಡುಗೆ ತೊಟ್ಟ ಕಟ್ಟುಮಸ್ತಾದ ಕುಸ್ತಿಪಟುಗಳು. ಇವರು ಉಡುವ ತುಂಡುಡುಗೆಯೂ ನಾನಾಬಗೆ, ನಾನಾ ಬಣ್ಣ, ಚಿತ್ತಾರಗಳಿಂದ ಕೂಡಿದ್ದು ಆಫ್ರಿಕದ ಬುಡಕಟ್ಟು ವೇಷಭೂಷಣವನ್ನು ಪ್ರತಿನಿಧಿಸುತ್ತದೆ. ಕಾಲ ಬದಲಾದರೂ ಸ್ಪರ್ಧಾಳುಗಳ ವಸ್ತ್ರ ಸಂಹಿತೆ ಮಾತ್ರ ಇಂದಿಗೂ ಬದಲಾಗಿಲ್ಲ.
ಕುಣಿಯುತ್ತಾ ಬರುವರು
ಸ್ಪರ್ಧೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಕುಸ್ತಿಪಟುಗಳು ತಮ್ಮದೇ ಶೈಲಿಯ ನೃತ್ಯದೊಂದಿಗೆ ಟೋಪಿಯನ್ನು ಮುಂದಕ್ಕೆ ಹಿಡಿಯುತ್ತಾ ಬರುತ್ತಾರೆ. ಅವರ ಹಿಂದೆ ಡೋಲುಗಾರರು ಮತ್ತು ಅಭಿಮಾನಿ ವರ್ಗವೂ ಇರುತ್ತದೆ. ಈ ಸಂದರ್ಭ ಅಲ್ಲಿ ನೆರೆದಿರುವ ಪ್ರೇಕ್ಷಕರ ವರ್ಗ ನಾಣ್ಯಗಳನ್ನು ಟೋಪಿಗೆ ಹಾಕಿ ಅವರನ್ನು ಪ್ರೋತ್ಸಾಹಿಸುವುದು ರೂಢಿ. ಆ ಬಳಿಕ ರೆಫ್ರಿ ಒಂದೊಂದಾಗಿಯೇ ಸ್ಪರ್ಧಾಳುಗಳ ಹೆಸರು ಘೋಷಿಸುತ್ತಾನೆ. ಮೊದಲು ಯುವ ವಯಸ್ಕರಿಂದ ಪ್ರಾರಂಭವಾಗುವ ಪಂದ್ಯಗಳು ಕೊನೆ ಕೊನೆಗೆ ಪ್ರೌಢ ವಯಸ್ಕರವರೆಗೆ ಸಾಗುತ್ತದೆ. ಸಮಾನ ವಯಸ್ಸು, ಬಲಶಾಲಿಗಳೊಳಗೆ ಮಾತ್ರ ಸ್ಪರ್ಧೆ. ದಢೂತಿಯೊಬ್ಬನ ಮುಂದೆ ನರಪೇತಲನನ್ನು ನಿಲ್ಲಿಸುವ ಪ್ರಶ್ನೆಯಿಲ್ಲ. ಹಂತ ಹಂತವಾಗಿ ವಯಸ್ಸು, ದೇಹದಾರ್ಢ್ಯತೆ ಹೆಚ್ಚಿರುವ ಸ್ಪರ್ಧಾಳುಗಳ ನಡುವೆ ನಡೆಯುತ್ತವೆ. ಅಂತಿಮ ಪಂದ್ಯಗಳೇನಿದ್ದರೂ ಈ ಹಿಂದಿನ ಪಂದ್ಯಾವಳಿಗಳಲ್ಲಿ ಮಿಂಚಿದ್ದ ಬಲಾಢ್ಯರ ನಡುವೆ.
ಪಂದ್ಯಗಳು ಕಳೆ ಕಟ್ಟುವುದೇ ಆಗ. ಚಿತ್ರವಿಚಿತ್ರ ಉಡುಗೆ, ಮರದ ಮುಖವಾಡ, ಚರ್ಮದ ಹೊದಿಕೆಗಳೊಂದಿಗೆ ಅಖಾಡ ಪ್ರವೇಶಿಸುವ ಕುಸ್ತಿಪಟುಗಳು ಎಲ್ಲರೆದುರೇ ಅವುಗಳನ್ನೆಲ್ಲ ಪ್ರದರ್ಶಿಸಿ ಆತ್ಮವಿಶ್ವಾಸ ಪ್ರಕಟಿಸುತ್ತಾರೆ. ಪ್ರಾರಂಭದಲ್ಲಿ ಚಳ್ಳೆಪಿಳ್ಳೆಗಳನ್ನು ನೋಡಿ ಬೋರಾದ ಪ್ರೇಕ್ಷಕರು ಇಲ್ಲಿ ಪಂದ್ಯ ಪ್ರಾರಂಭಕ್ಕೆ ಮುನ್ನ ಡಬ್ಲ್ಯೂಡಬ್ಲ್ಯೂಇನ ಶೋಬಾಜಿಯನ್ನು ನೋಡಬಹುದು.
ನಿಯಮಗಳು
ಇದರ ನಿಯಮ ಬಹಳ ಸರಳ. ಯಾರು ಮೊದಲು ಮೈದಾನದಲ್ಲಿ ಮಕಾಡೆ ಮಲಗಿದರೋ ಅವರು ಪಂದ್ಯ ಸೋತಂತೆ. ಅದಕ್ಕಾಗಿ ಕೈಗಳನ್ನು ಮಾತ್ರ ಬಳಸಬೇಕು. ಮೇಲುಗೈ ಸಾಧಿಸುವ ಸಲುವಾಗಿ ಎರ್ರಾಬಿರ್ರಿ ಎಗರಾಡುವಂತಿಲ್ಲ. ಒದೆಯುವುದಾಗಲಿ, ಹೊಡೆಯುವುದಾಗಲಿ, ಗುದ್ದುವುದಾಗಲಿ ಮಾಡುವಂತಿಲ್ಲ. ಅದೇ ರೀತಿಯಲ್ಲಿ ಎದುರಾಳಿಯ ಕಣ್ಣಿಗೆ ಮರಳೆರಚುವಂತಿಲ್ಲ. ಇನ್ನು ಪ್ರತಿಸ್ಪರ್ಧಿಯನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸಲು ಪ್ರಯತ್ನಿಸಿದರಂತೂ ಅತನಿಗೆ ರೆಫ್ರಿಯಾದಿಯಾಗಿ ನೆರೆದಿರುವ ಜನರೇ ಛೀಮಾರಿ ಹಾಕುತ್ತಾರೆ. ಗೆಲುವಲ್ಲಿ ನ್ಯಾಯವಿರಬೇಕು ಎಂಬುದೂ ಇಲ್ಲಿನ ನಿಯಮಗಳಲ್ಲೊಂದು. ಇಷ್ಟೇ ಯಾಕೆ ಎದುರಾಳಿಯನ್ನು ಮೂದಲಿಸುವಂತೆಯೂ ಇಲ್ಲ. ಎದುರಾಳಿಯನ್ನು ನೆಲಕ್ಕುರುಳಿಸಲು ಮಾಡುವ ಕಸರತ್ತು ನೋಡಲು ಸುಂದರ. ಇಲ್ಲಿ ಹಿಂಸೆಯ ಲವಲೇಶವೂ ಕಾಣಸಿಗದು.
ಇಲ್ಲಿ ಎರಡು ಹಳ್ಳಿಗಳ ತಮ್ಮ ಗೌರವ, ಆತ್ಮಪ್ರತಿಷ್ಠೆಯನ್ನೇ ಪಣಕ್ಕಿಡುತ್ತವೆ. ಎದುರಾಳಿಗೆ ಸವಾಲು ಎಸೆಯಲಾಗುತ್ತದೆ ಮತ್ತು ಈ ಸವಾಲನ್ನು ಹಳ್ಳಿಗೆ ಹಳ್ಳಿಯೇ ಸ್ವೀಕರಿಸುತ್ತದೆ. ಡ್ರಮ್ ಬೀಟ್ಗಳೊಂದಿಗೆ ನಡೆಯುವ ಪಂದ್ಯ ವೀಕ್ಷಿಸುವುದೇ ರೋಮಾಂಚನಕಾರಿ, ಗೆದ್ದವನೇ ವೀರಕೇಸರಿ...
-ಗಣೇಶ್ ಪ್ರಸಾದ್ ಕುಂಬ್ಳೆ