
ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ತಾವು ಇನ್ನು ಮುಂದೆ ಐಪಿಎಲ್ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಬುಧವಾರ ಸುಪ್ರೀಂಕೋರ್ಟ್ ಅನುಮತಿ ಕೇಳಿರುವ ಶ್ರೀನಿವಾಸನ್, ನ್ಯಾಯಾಲಯ ಅನುಮತಿ ನೀಡುವುದಾದರೆ ತಾವು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಯಸುತ್ತೇನೆ ಒಂದು ವೇಳೆ ಚುನಾವಣೆಯಲ್ಲಿ ತಾವು ಗೆದ್ದರೆ, ನ್ಯಾಯಾಲಯ ಆದೇಶ ನೀಡುವವರೆಗೂ ಐಪಿಎಲ್ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಮುದ್ಗಲ್ ಸಮಿತಿ ನನ್ನನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಆರೋಪಮುಕ್ತನಾಗಿ ಮಾಡಿರುವುದರಿಂದ ನನ್ನನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡಬೇಕೆಂದು ಶ್ರೀನಿವಾಸನ್ ಸುಪ್ರೀಂ ಕೋರ್ಟ್‌ಗೆ ಮನವಿ ಇಟ್ಟಿದ್ದರು. ಈ ಅನುಮತಿಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸುಪ್ರೀಂ, ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಇತ್ಯರ್ಥವಾಗುವವರೆಗೆ ಬಿಸಿಸಿಐನ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುವಂತೆ ಕೋರ್ಟ್ ಹೇಳಿತ್ತು. ಆದರೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷನಾಗಿಯೇ ಸಭೆಗಳಲ್ಲಿ ಏಕೆ ಭಾಗವಹಿಸುತ್ತಿದ್ದಿರಿ ಎಂದು ಜಸ್ಟಿಸ್ ಟಿ.ಎಸ್. ಠಾಕೂರ್ ಶ್ರೀನಿವಾಸನ್ ಅವರನ್ನು ಪ್ರಶ್ನಿಸಿದ್ದರು.
ಅಲ್ಲದೆ, ನಿಮಗೆ ಕ್ರಿಕೆಟ್ ಆಟದ ಮೇಲಿರುವ ಉತ್ಸಾಹ ಅರ್ಥವಾಗುತ್ತದೆ. ಹಾಗೆಂದು ಅತಿಯಾದ ಭಾವೋದ್ರೇಕರಾಗಬೇಡಿ, ನೀವು ಇದೇ ರೀತಿ ಬಿಸಿಸಿಐನ ಸಭೆಗಳಲ್ಲಿ ಭಾಗವಹಿಸುತ್ತಿದ್ದರೆ ಚುನಾವಣೆಯೂ ತ್ವರಿತಗತಿಯಲ್ಲಿ ಆಗುವುದಿಲ್ಲ. ಆದ್ದರಿಂದ ಬಿಸಿಸಿಐನಿಂದ ದೂರ ಉಳಿಯುವುದೇ ಒಳ್ಳೆಯದು ಎಂದು ಹೇಳಿದ್ದರು.
ಕಳೆದ ವರ್ಷ ಐಪಿಎಲ್ ಹಾಗೂ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಮುದ್ಗಲ್ ಸಮಿತಿ ತನಿಖೆ ನಡೆಸಿ ವರದಿಯೊಂದನ್ನು ಸಲ್ಲಿಸಿತ್ತು. ಆ ವರದಿಯಲ್ಲಿ ಶ್ರೀನಿವಾಸ್ ಮತ್ತು 12 ಮಂದೆ ಹೆಸರು ಇರುವುದಾಗಿ ಸಮಿತಿ ತಿಳಿಸಿತ್ತು. ಆದ್ದರಿಂದ ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಮುದ್ಗಲ್ ಸಮಿತಿಗೆ ಸೂಚಿಸಿತ್ತು.
ಸಮಿತಿ ಎರಡು ತಿಂಗಳು ವಿಚಾರಣೆ ನಡೆಸಿ ನವೆಂಬರ್ 3 ರಂದು ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಹೇಳಿತ್ತು. ಆದರೆ ಅವರ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಸಹ ಮಾಲೀಕ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು.
Advertisement