
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಭಾರತೀಯ ಬ್ಯಾಟ್ಸಮನ್‌ಗಳು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಭಾರತದ ಪರ ಆರಂಭಿಕ ಆಟಗಾರ ಮುರಳಿ ವಿಜಯ್ (53), ಚೇತೇಶ್ವರ ಪೂಜಾರ (73) ಮತ್ತು ನಾಯಕ ವಿರಾಟ್ ಕೊಹ್ಲಿ (56) ಅರ್ಧ ಶತಕಗಳನ್ನು ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಪ್ರತಿರೋಧ ಒಡ್ಡಿದ್ದಾರೆ. ಇಂದು ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಅವರ ಜೋಡಿ ಕೇವಲ 30ರನ್‌ಗಳಿಗೇ ಮುರಿಯಿತು. 25 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶಿಖರ್ ಧವನ್ ಅವರು ಹ್ಯಾರಿಸ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೋಲ್ಡ್ ಆದರು.
ಬಳಿಕ ಬಂದ ಪೂಜಾರ ಮತ್ತು ಮುರಳಿ ವಿಜಯ್ ಜೋಡಿ ಭಾರತವನ್ನು ಆರಂಭಿಕ ಆಘಾತದಿಂದ ಮೇಲೆತ್ತಿತು. ಈ ಒಟ್ಟು 81 ರನ್‌ಗಳಿಸುವ ಮೂಲಕ ಭರವಸೆ ಮೂಡಿಸಿತ್ತು. ಆದರೆ ಈ ಹಂತದಲ್ಲಿ ದಾಳಿಗಿಳಿದ ಆಸಿಸ್‌ನ ಮಿಚೆಲ್ ಜಾನ್ಸನ್ ಅವರು ಅರ್ಧಶತಕ ಗಳಿಸಿದ್ದ ಮುರಳಿ ವಿಜಯ್ ಅವರ ವಿಕೆಟ್ ಪಡೆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಅವರು ನಿಧಾನವಾಗಿ ಕ್ರೀಸ್‌ಗೆ ಅಂಟಿಕೊಳ್ಳುವ ಪ್ರಯತ್ನ ಮಾಡಿದರು. ಮೈದಾನದಲ್ಲಿ ಸಮಯೋಚಿತ ಆಟ ಪ್ರದರ್ಶಿಸಿದ ಕೊಹ್ಲಿ ನೋಡ ನೋಡುತ್ತಿದ್ದಂತೆಯೇ ಅರ್ಧ ಶತಕ ಗಳಿಸಿದರು.
ಪೂಜಾರ ಮತ್ತು ಕೊಹ್ಲಿ ಜೋಡಿ 81 ರನ್‌ಗಳ ಕಾಣಿಕೆ ನೀಡುವ ಮೂಲಕ ಆಸ್ಟ್ರೇಲಿಯಾ ಒಡ್ಡಿದ್ದ ಬೃಹತ್ 517ರನ್‌ಗಳ ಮೊತ್ತಕ್ಕೆ ಸೆಡ್ಡು ಹೊಡೆಯುವಂತಿತ್ತು. ಆದರೆ ಈ ಹಂತದಲ್ಲಿ ಎಚ್ಚರ ತಪ್ಪಿದ ಪೂಜಾರ ಲಿಯಾನ್ ಎಸೆತದಲ್ಲಿ ಬೋಲ್ಡ್ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡುವಂತೆ ಮಾಡಿದರು. ನಾಯಕ ವಿರಾಟ್ ಕೊಹ್ಲಿಯೊಂದಿಗೆ ಕ್ರೀಸ್ ಹಂಚಿಕೊಂಡ ಯುವ ಆಟಗಾರ ಅಂಜಿಕ್ಯಾ ರಹಾನೆ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಅರ್ಧಶತಕ ಗಳಿಸಿದರು. ಆದರೆ ತಂಡದ ಮೊತ್ತ 293ರನ್‌ಗಳಾಗಿದ್ದಾಗ ಲಿಯಾನ್ ಬೌಲಿಂಗ್‌ನಲ್ಲಿ ವಾಟ್ಸನ್‌ಗೆ ಕ್ಯಾಚ್ ನೀಡುವ ಮೂಲಕ ರಹಾನೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಇತ್ತೀಚಿನ ವರದಿಗಳ ಪ್ರಕಾರ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 300 ರನ್‌ಗಳಿಸಿದೆ. 74 ರನ್‌ಗಳಿಸಿರುವ ವಿರಾಟ್ ಕೊಹ್ಲಿ ಮತ್ತು 4ರನ್ ಗಳಿಸಿರುವ ಶರ್ಮಾ ಅವರು ಕ್ರೀಸ್‌ನಲ್ಲಿದ್ದಾರೆ.
ಆತಂಕ ಮೂಡಿಸಿದ್ದ ಜಾನ್ಸನ್ ಬೌನ್ಸರ್
ಕೌಂಟಿ ಕ್ರಿಕೆಟ್ ಪಂದ್ಯದಲ್ಲಿ ಸೀನ್ ಅಬಾಟ್ ಎಸೆದ ಬೌನ್ಸರ್ ಪೆಟ್ಟಿನಿಂದಾಗಿ ಸಾವಿಗೀಡಾದ ಫಿಲಿಪ್ ಹ್ಯೂಸ್ ಪ್ರಕರಣ ಕ್ರೀಡಾ ಜಗತ್ತಿನಲ್ಲಿ ಆತಕಂದ ಕಾರ್ಮೋಡ ಕವಿಯುವಂತೆ ಮಾಡಿದೆ. ಇಂದು ಅಡಿಲೇಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿಯೂ ಮರುಕಳಿಸಿದ್ದು, ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದ ವೇಳೆ ಆಸಿಸ್ ಬೌಲರ್ ಮಿಚೆಲ್ ಜಾನ್ಸನ್ ಎಸೆದ ಬೌನ್ಸರ್‌ವೊಂದು ನೇರವಾಗಿ ಕೊಹ್ಲಿ ತಲೆಗೆ ಬಿದಿತ್ತು. ಇದರಿಂದ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊಹ್ಲಿ ಹೆಲ್ಮೆಟ್ ಬಿಚ್ಚುತ್ತಿದಂತೆಯೇ ಅವರನ್ನು ಸುತ್ತುವರೆದ ಆಸಿಸ್ ಆಟಗಾರರು ಕೊಹ್ಲಿ ಅವರಿಗೆ ಏನಾಯಿತು ಎಂದು ಕೇಳುತ್ತಿದ್ದರು. ಅದೃಷ್ಟವಶಾತ್ ಬಾಲ್ ಕೊಹ್ಲಿ ಅವರ ಹೆಲ್ಮೆಟ್‌ಗೆ ಬಡಿದಿತ್ತು.
Advertisement