ಅಡಿಲೇಡ್ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಭಾರತ 369/5

ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 3ನೇ ದಿನದಾಟ ಮುಕ್ತಾಯವಾಗಿದ್ದು, ಭಾರತ 5 ವಿಕೆಟ್ ನಷ್ಟಕ್ಕೆ 369ರನ್‌ಗಳಿಸಿದೆ.
3ನೇ ದಿನದಾಟ ಅಂತ್ಯದಲ್ಲಿ ವಿಕೆಟ್ ಪಡೆಯಲು ಆಸ್ಟ್ರೇಲಿಯಾ ತಂಡದ ಪ್ರಯತ್ನ
3ನೇ ದಿನದಾಟ ಅಂತ್ಯದಲ್ಲಿ ವಿಕೆಟ್ ಪಡೆಯಲು ಆಸ್ಟ್ರೇಲಿಯಾ ತಂಡದ ಪ್ರಯತ್ನ
Updated on

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 3ನೇ ದಿನದಾಟ ಮುಕ್ತಾಯವಾಗಿದ್ದು, ಭಾರತ 5 ವಿಕೆಟ್ ನಷ್ಟಕ್ಕೆ 369ರನ್‌ಗಳಿಸಿದೆ.

ಶಿಖರ್‌ಧವನ್ ಅವರನ್ನು ಹೊರತು ಪಡಿಸಿ, ಆರಂಭಿಕ ಆಟಗಾರರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡ ನೀಡಿದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಭಾರತ ತಂಡ ಉತ್ತಮ ತಿರುಗೇಟು ನೀಡಿದೆ. ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ, ಪೂಜಾರ, ಮುರಳಿ ವಿಜಯ್ ಮತ್ತು ಅಜಿಂಕ್ಯಾ ರಹಾನೆ ಅವರ ಅರ್ಧಶತಕಗಳು 3ನೇ ದಿನದ ಹೈಲೈಟ್ಸ್ ಆಗಿತ್ತು.

ಇನ್ನು ಮಿಚೆಲ್ ಜಾನ್ಸನ್ ಎಸೆದ ಬೌನ್ಸರ್‌ವೊಂದು ವಿರಾಟ್ ಕೊಹ್ಲಿ ಅವರ ಹೆಲ್ಮೆಟ್‌ಗೆ ಬಡಿದ ಸಂದರ್ಭ ಉಭಯ ತಂಡದ ಆಟಗಾರರಲ್ಲಿ ಕೊಂಚ ಆತಂಕ ಮನೆ ಮಾಡಿತ್ತು. ಕೌಂಟಿ ಕ್ರಿಕೆಟ್ ಪಂದ್ಯದಲ್ಲಿ ಸೀನ್ ಅಬಾಟ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಅವರ ಸಾವಿಗೆ ಕಾರಣವಾಗಿತ್ತು. ಈ ಘಟನೆಯ ಹಿನ್ನಲೆಯಲ್ಲಿ ಉಭಯ ತಂಡದ ಆಟಗಾರರು ಕೊಂಚ ಆತಂಕಗೊಳಗಾಗಿದ್ದರು. ಇದನ್ನು ಹೊರತು ಪಡಿಸಿದರೆ ಶತಕ ಸಿಡಿಸಿ ಸಂಭ್ರಮಿಸಿದ್ದ ನಾಯಕ ವಿರಾಟ್ ಕೊಹ್ಲಿ ಅವರು ದಿನದ ಅಂತ್ಯದಲ್ಲಿ 95ನೇ ಓವರ್‌ನಲ್ಲಿ ಮಿಚೆಲ್ ಜಾನ್ಸನ್ ಎಸೆತದಲ್ಲಿ ಹ್ಯಾರಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಆರ್.ಶರ್ಮಾ ಅವರನ್ನು ಜೊತೆಗೂಡಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ನೈಟ್ ವಾಚ್‌ಮನ್ ಕರ್ತವ್ಯ ನಿಭಾಯಿಸುವ ಮೂಲಕ ಭಾರತಕ್ಕೆ ಮತ್ತೊಂದು ಆಘಾತ ಎದುರಾಗದಂತೆ ನೋಡಿಕೊಂಡರು. ದಿನದ ಅಂತ್ಯದ ಸಮಯದಲ್ಲಿ ಕ್ರೀಸ್‌ಗಿಳಿದ ಸಾಹಾ ಒಟ್ಟು 16 ಎಸೆತಗಳನ್ನು ಎದುರಿಸಿ 1 ರನ್‌ಗಳಿಸುವ ಮೂಲಕ ಕ್ರೀಸ್‌ಗೆ ಅಂಟಿಕೊಳ್ಳುವ ಕಾರ್ಯಕ್ಕೆ ಮುಂದಾದರು. ಮತ್ತೊಂದು ತುದಿಯಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದ ಆರ್.ಶರ್ಮಾ 61 ಎಸೆತಗಳಲ್ಲಿ 33ರನ್‌ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಒಟ್ಟಾರೆ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 97 ಓವರ್‌ಗಳನ್ನು ಎದುರಿಸಿರುವ ಭಾರತ ತಂಡ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, 369 ರನ್‌ಗಳನ್ನು ಗಳಿಸಿದೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ 517ರನ್‌ಗಳ ಬಾಕಿಯನ್ನು ಚುಕ್ತಾ ಮಾಡಲು ಭಾರತ ತಂಡ ಇನ್ನೂ 148ರನ್‌ಗಳನ್ನು ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 517/7
ಭಾರತ ಮೊದಲ ಇನ್ನಿಂಗ್ಸ್ 369/5 (3ನೇ ದಿನದಾಟ ಅಂತ್ಯಕ್ಕೆ)

ಮುರಳಿ ವಿಜಯ್ (53 ರನ್, 88 ಎಸೆತ)
ಶಿಖರ್ ಧವನ್ (25 ರನ್, 24 ಎಸೆತ)
ಚೇತೇಶ್ವರ ಪೂಜಾರ (73 ರನ್, 135 ಎಸೆತ)
ವಿರಾಟ್ ಕೊಹ್ಲಿ (115 ರನ್, 184 ಎಸೆತ)
ಅಜಿಂಕ್ಯಾ ರಹಾನೆ (62 ರನ್, 76 ಎಸೆತ)
ಆರ್.ಶರ್ಮಾ (ನಾಟೌಟ್) (33ರನ್, 61 ಎಸೆತ)
ವಿ.ಸಾಹಾ (ನಾಟೌಟ್) (1 ರನ್, 16 ಎಸೆತ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com