
ನವದೆಹಲಿ: ಫಿಕ್ಸಿಂಗ್ ಪ್ರಕರಣ ಇತ್ಯರ್ಥಗೊಳ್ಳದ ಹಿನ್ನೆಲೆಯಲ್ಲಿ , ಬಿಸಿಸಿಐನ ವಾರ್ಷಿಕ ಮಹಾಸಭೆ (ಎಜಿಎಂ) ಹಾಗೂ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಗಳನ್ನು 2015ರ ಜನವರಿ 31ರ ವರೆಗೆ ಮುಂದೂಡಲು ಸುಪ್ರೀಂ ಕೋರ್ಟ್, ಬಿಸಿಸಿಐಗೆ ಅನುಮತಿ ನೀಡಿದೆ. ಪೂರ್ವ ನಿಗದಿಯಂತೆ ಡಿ.17ರಂದು ಬಿಸಿಸಿಐನ ವಾರ್ಷಿಕ ಮಹಾಸಭೆ ನಡೆಯಬೇಕಿತ್ತು. ಆದರೆ ಫಿಕ್ಸಿಂಗ್ ವಿಚಾರಣೆ ಇನ್ನೂ ಮುಂದುವರಿಯದಿರವ ಹಿನ್ನೆಲೆಯಲ್ಲಿ, ಬಿಸಿಸಿಐ ಸಭೆ ಹಾಗೂ ಚುನಾವಣೆಯನ್ನು ಮುಂದೂಡಲಿಚ್ಛಿಸಿತ್ತು. ಮಂಡಳಿಯ ಇಚ್ಛೆಗೆ ನ್ಯಾ. ಎ.ಎಸ್ ಠಾಕೂರ್ ನೇತೃತ್ವದ ನ್ಯಾಯಪೀಠ ಅಸ್ತು ಎಂದಿದೆ.
ಇದಲ್ಲದೆ, ಶ್ರೀನಿವಾಸನ್ ಅವರ ಸ್ವಹಿತಾಸಕ್ತಿ ಸಂಘರ್ಷದ ಬಗ್ಗೆ ಕೂಲಂಕಷ ವಿಚಾರಣೆ ಮಾಡಲು ಐಪಿಎಲ್ ಫಿಕ್ಸಿಂಗ್ ಪ್ರಕರಣವನ್ನು ಇತ್ಯರ್ಥಗೊಳಿಸಲು, ತಪ್ಪಿತಸ್ಥರ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಲು ಹಾಗೂ ಮುಂದಿನ ಐಪಿಎಲ್ ಹಾದಿಯನ್ನು ಕಳಂಕ ರಹಿತವಾಗಿಸಲು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳುಳ್ಳ ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಏತನ್ಮಧ್ಯೆ, ಸಮಿತಿ ರಚಿಸುವುದರಿಂದ ತನ್ನ ಸ್ವಾಯತ್ತತೆಗೆ ಧಕ್ಕೆ ಬರಲಿದೆ ಎನ್ನುವ ಬಿಸಿಸಿಐ ವಾದಕ್ಕೆ ಸ್ಪಷ್ಟನೆ ನೀಡಿರುವ ನ್ಯಾಯಾಲಯ , ಸಮಿತಿಯಲ್ಲಿ ಹೊರವ್ಯಕ್ತಿಗಳು ಇಲ್ಲದಿರುವುದರಿಂದ ಬಿಸಿಸಿಐ ಆತಂಕಪಡುವ ಅಗತ್ಯವಿಲ್ಲ ಎಂದಿದೆ. ಸಮಿತಿಯಲ್ಲಿ ನ್ಯಾಯಮೂರ್ತಿಗಳ ಬದಲು, ಸುಪ್ರೀಂಕೋರ್ಟ್ ಸೂಚಿಸುವ ನ್ಯಾಯಮೂರ್ತಿಗಳೇ ಇರುತ್ತಾರೆ ಎಂದು ಸುಪ್ರೀಂ ಹೇಳಿದೆ.
ಬುಧವಾರ , ವಿಚಾರಣೆ ಆರಂಭವಾದಾಗ ಶ್ರೀನಿವಾಸನ್ ಅವರು ತಮಗೆ ಬಿಸಿಸಐ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಮತ್ತೊಮ್ಮೆ ಕೋರಿದರು. ಅಲ್ಲದೆ, ತಾವು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ, ಐಪಿಎಸ್ ಫಿಕ್ಸಿಂಗ್ ಪ್ರಕರಣ ಮುಕ್ತಾಯವಾಗುವವರೆಗೂ ಐಪಿಎಲ್‌ನ ಆಂತರಿಕ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ ಎಂದೂ ಆಶ್ವಾಸನೆ ನೀಡಿದ್ದಾರೆ.
Advertisement