ಅಡಿಲೇಡ್ ಟೆಸ್ಟ್: 4ನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 290/5
ಅಡಿಲೇಡ್: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 4ನೇ ದಿನದಾಟ ಅಂತ್ಯವಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 5 ವಿಕೆಟ್ ನಷ್ಟಕ್ಕೆ 290ರನ್ ಗಳಿಸಿದೆ.
3ನೇ ದಿನದಾಟದ ಅಂತ್ಯಕ್ಕೆ 5 ಕಳೆದುಕೊಂಡಿದ್ದ ಭಾರತ 369ರನ್‌ಗಳಿಸಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಭಾರತದ ಬಾಲಗೋಚಿಗಳು ಕ್ರೀಸ್‌ನಲ್ಲಿ ಗಟ್ಟಿಯಾಗಿ ಉಳಿಯುವಲ್ಲಿ ವಿಫಲರಾದರು. ಪರಿಣಾಮ ನಾಲ್ಕನೇ ದಿನದಾಟದಲ್ಲಿ ಭಾರತ ಕೇವಲ 75 ರನ್‌ಗಳನ್ನು ಮಾತ್ರ ಸೇರಿಸಿತು. ಆ ಮೂಲಕ ಆಸಿಸ್ ತಂಡ 109ರನ್‌ಗಳ ಮುನ್ನಡೆ ಪಡೆಯಿತು. ಆರ್.ಶರ್ಮಾ (43 ರನ್‌ಗಳು), ವೃದ್ದಿಮಾನ್ ಸಾಹಾ (25 ರನ್) ಮತ್ತು ಮಹಮದ್ ಶಮಿ (34) ಅವರನ್ನು ಹೊರತು ಪಡಿಸಿದರೆ ಉಳಿದವರಾರೂ ಎರಡಂಕಿ ಮೊತ್ತವನ್ನು ದಾಟುವಲ್ಲಿಯೂ ಕೂಡ ವಿಫಲರಾದರು. ಅಂತಿಮವಾಗಿ ಭಾರತ ತಂಡ 444ರನ್‌ಗಳಿಗೆ ಆಲ್‌ಔಟ್ ಆಯಿತು.
109ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸಿಸ್ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 38ರನ್‌ಗಳಿದ್ದಾಗ ಆರಂಭಿಕ ಆಟಗಾರ ರೋಜರ್ಸ್ ಶರ್ಮಾ ಬೌಲಿಂಗ್‌ನಲ್ಲಿ ಔಟ್‌ಆದರು. ಬಳಿಕ ಕ್ರೀಸ್‌ಗಿಳಿದ ವಾಟ್ಸನ್ ಭಾರತದ ಬೌಲರ್‌ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು. ವಾರ್ನರ್ ಮತ್ತು ವಾಟ್ಸನ್ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಆಸಿಸ್ ತಂಡ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡರು. ಈ ಹಂತದಲ್ಲಿ ದಾಳಿಗಿಳಿದ ಭಾರತೀಯ ವೇಗಿ ಶಮಿ, ವಾಟ್ಸನ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಆ ಹೊತ್ತಿಗಾಗಲೇ 33 ರನ್‌ಗಳಿಸಿದ್ದ ವಾಟ್ಸನ್ ನಿರಾಸೆಯಿಂದಲೇ ಪೆವಿಲಿಯನ್ ಸೇರಿಕೊಂಡರು. ಬೆನ್ನುನೋವಿನ ಹೊರತಾಗಿಯೂ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಆಸಿಸ್ ನಾಯಕ ಕ್ಲಾರ್ಕ್ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗೆ ಅಂಟಿಕೊಳ್ಳುವ ಮುನ್ನವೇ ವರುಣ್ ಆರೋನ್ ಬೌಲಿಂಗ್‌ನಲ್ಲಿ ಔಟ್‌ಆದರು.
ಬಳಿಕ ವಾರ್ನರ್ ಜೊತೆಗೂಡಿದ ಸ್ಮಿತ್ ಕೆಲಹೊತ್ತು ಭಾರತೀಯ ಬೌಲರ್‌ಗಳನ್ನು ಕಾಡಿದರು. ಸ್ಮಿತ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರೆ, ವಾರ್ನರ್ ಎಂದಿನ ತಮ್ಮ ಶೈಲಿಯಲ್ಲೇ ಬ್ಯಾಟ್ ಬೀಸುತ್ತಿದ್ದರು. ಇದೇ ವೇಳೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೂಡ ವಾರ್ನರ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಭಾರತಕ್ಕೆ ಮಾರಕವಾಗುವ ಮುನ್ಸೂಚನೆ ನೀಡಿದ್ದ ಸ್ಮಿತ್ ಮತ್ತು ವಾರ್ನರ್ ಜೋಡಿಯನ್ನು ಕೆವಿ ಶರ್ಮಾ ಅವರು ಮುರಿದರು. ಇನ್ನಿಂಗ್ಸ್‌ನ 60ನೇ ಓವರ್‌ನ ಮೊದಲ ಎಸೆತದಲ್ಲಿಯೇ ವಾರ್ನರ್ ಶರ್ಮಾ ಎಸೆತವನ್ನು ತಪ್ಪಾಗಿ ಗ್ರಹಿಸಿ ಕ್ಲೀನ್ ಬೋಲ್ಡ್ ಆದರು. ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಶತಕದ ಸಿಡಿಸಿದ ಹೆಮ್ಮೆಯೊಂದಿಗೆ ವಾರ್ನರ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಇನ್ನು ವಾರ್ನರ್ ಬಳಿಕ ಬಂದ ಮಾರ್ಷ್ ಬಿರುಸಿನ ಆಟಕ್ಕೆ ಮುಂದಾದರು. ಕೇವಲ 26 ಎಸೆತಗಳನ್ನು ಎದುರಿಸಿದ ಮಾರ್ಷ್ ಬರೊಬ್ಬರಿ 40 ರನ್‌ಗಳಿಸಿ ಔಟಾದರು. ಬಳಿಕ ದಿನದ ಅಂತ್ಯದಲ್ಲಿ ಕ್ರೀಸ್‌ಗೆ ಬಂದ ಹಡ್ಡಿನ್ ಸಮಯೋಚಿತ ಆಟ ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ ಎದುರಾಗದಂತೆ ನೋಡಿಕೊಂಡರು. ಇದೇ ಹಂತದಲ್ಲಿ ಮತ್ತೊಂದು ತುದಿಯಲ್ಲಿ ಸರಾಗವಾಗಿ ಬ್ಯಾಟ್ ಬೀಸುತ್ತಿದ್ದ ಸ್ಮಿತ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 14ರನ್ ಗಳಿಸಿರುವ ಹಡ್ಡಿನ್ ಮತ್ತು 52 ರನ್‌ಗಳಿಸಿರುವ ಸ್ಮಿತ್ ಐದನೇ ದಿನಕ್ಕೆ ಕ್ರೀಸ್ ಕಾಯ್ದು ಕೊಂಡಿದ್ದಾರೆ.
ತೀವ್ರ ಹಣಾಹಣಿಯಿಂದ ಕೂಡಿರುವ ಈ ಪಂದ್ಯ ಬಹುತೇಕ ಡ್ರಾದತ್ತ ಸಾಗಿದ್ದು, ನಾಳೆ ಪಂದ್ಯದ ಅಂತಿಮ ದಿನವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ವೇಗವಾಗಿ ರನ್‌ಗಳಿಸಿ, ಭಾರತಕ್ಕೆ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡುವುದಲ್ಲದೇ ಭಾರತೀಯ ಬ್ಯಾಟ್ಸಮನ್‌ಗಳನ್ನು ಬೇಗನೆ ಕಟ್ಟಿಹಾಕಿದರೆ ಮಾತ್ರ ಗೆಲುವು ಸಂಪಾದಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ