
ನವದೆಹಲಿ; ಐಪಿಎಲ್ 8ನೇ ಆವೃತ್ತಿಯಲ್ಲಿ ಯುವರಾಜ್ ಸಿಂಗ್, ದಿನೇಶ್ ಕಾರ್ತಿಕ್ ಸೇರಿದಂತೆ ಪ್ರಮುಖ ಆಟಗಾರರನ್ನು ಫ್ರಾಂಚೈಸಿಗಳು ತಮ್ಮ ತಂಡದಿದ ಕೈ ಬಿಟ್ಟಿವೆ. ಇನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಾಯಕ ಕೆವಿನ್ ಪೀಟರ್ಸನ್ ಸೇರಿದಂತೆ ತಂಡ 13ಆಟಗಾರರನ್ನು ಕೈಬಿಟ್ಟಿದೆ.
ಪ್ರತಿ ಫ್ರಾಂಚೈಸಿಯು ಮುಂದಿನ ಆವೃತ್ತಿಗೆ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಅಂತಿಮ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಸೋಮವಾರ ಅಂತಿಮ ದಿನವಾಗಿತ್ತು. ಈ ವೇಳೆ ಕಳೆದ ಆವೃತ್ತಿಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿದ್ದ ಯುವರಾಜ್ ಸಿಂಗ್ (14ಕೋಟಿ)ರನ್ನು ಡೆಲ್ಲಿ ಡೇರ್ ಡೆವಿಲ್ಸ್ ಕೈ ಬಿಟ್ಟಿದೆ.
ಒಟ್ಟು 53 ಆಟಗಾರರು ತಂಡಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಚೇತೇಶ್ವರ ಪೂಜಾರ, ಮುರಳಿ ಕಾರ್ತಿಕ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಅವರನ್ನು ಕೈಬಿಟ್ಟಿದೆ. ಇನ್ನೊಂದೆಡೆ ಡೆಲ್ಲಿ ಡೇರ್‌ಡೆವಿಲ್ಸ್ ದಿನೇಶ್ ಕಾರ್ತಿಕ್ ಜತೆಗೆ ನಾಯಕ ಕೆವಿನ್ ಪೀಟರ್ಸನ್, ರಾಸ್ ಟೇಲರ್ ಸೇರಿದಂತೆ ಒಟ್ಟು 13 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಡೆಲ್ಲಿ ತಂಡ ಜೆ.ಪಿ.ಡುಮಿನಿ, ಖಿಂಟಾನ್ ಡಿ ಕಾಕ್ ಹಾಗೂ ಮೊಹಮದ್ ಶಮಿ ಅವರನ್ನು ಉಳಿಸಿಕೊಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ಡಾರೆನ್ ಸಾಮಿ, ಇರ್ಫಾನ್ ಪಠಾಣ್ ಹಾಗೂ ಅಮಿತ್ ಮಿಶ್ರಾ ಅವರನ್ನು ಬಿಡುಗಡೆ ಮಾಡಿದೆ. ಮುಂಬೈ ತಂಡ ಜಹೀರ್, ಪ್ರಗ್ಯಾನ್ ಓಜಾ ಹಾಗೂ ಸಿ.ಎಂ ಗೌತಮ್‌ರನ್ನು ಕೈಬಿಟ್ಟಿದೆ.
ಈ ತಂಡಗಳು ದುಬಾರಿ ಆಟಗಾರರನ್ನು ಕೈಬಿಟ್ಟಿದ್ದು, ಮುಂದಿನ ಆವೃತ್ತಿಗೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಜೇಬಿನಲ್ಲಿನ ಮೊತ್ತವನ್ನು ಹೆಚ್ಚಿಸಿಕೊಂಡಿವೆ. ಮುಂಬರುವ ಹರಾಜಿನಲ್ಲಿ ಹೊಸ ಸ್ವರೂಪದಲ್ಲಿ ತಂಡ ಕಟ್ಟಲು ನಿರ್ಧರಿಸಿವೆ.
Advertisement