
ನವದೆಹಲಿ: ಬಿಸಿಸಿಐನ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಸ್ಫರ್ಧೆಗಿಳಿಯಬೇಕೆ ಅಥವಾ ಬೇಡವೇ ಹಾಗೂ ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸಿಯಿಂದ ಅವರನ್ನು ತೆಗೆದುಹಾಕಬೇಕೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದೆ.
ಶ್ರೀನಿವಾಸನ್ ಮತ್ತೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದಾರೆ. ಆದರೆ ಕೋರ್ಟ್, ಇನ್ನಷ್ಟೇ ಅಧಿಕೃತವಾಗಿ ಸ್ಪಷ್ಟ ಆದೇಶ ನೀಡಬೇಕಿದೆ.
ಬಿಹಾರ ಕ್ರಿಕೆಟ್ ಸಂಸ್ಥೆ ಹಿತಾಸಕ್ತಿಯ ಸಂಘರ್ಷದ ಆಧಾರದ ಮೇಲೆ ಶ್ರೀನಿವಾಸನ್ ಮತ್ತೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ಅರ್ಜಿ ಸಲ್ಲಿಸಿತ್ತು.
ಈ ಮಧ್ಯೆ ಒಂದು ಮತ್ತು ಅದಕ್ಕಿಂತ ಹೆಚ್ಚು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪಟ್ಟಿಯನ್ನು ಬಿಸಿಸಿಐ, ಸುಪ್ರೀಂ ಕೋರ್ಟ್ ಗೆ ನೀಡಿದೆ.
ಇರದಲ್ಲಿ ಭಾರತ ತಂಡದ ಮಾಜಿ ನಾಯಕರುಗಳಾದ ಸುನೀಲ್ ಗವಾಸ್ಕರ್, ರವಿಶಾಸ್ತ್ರಿ, ಸೌರವ್ ಗಂಗೂಲಿ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಜತೆಗೆ ಲಾಲ್ ಚಂದ್ ರಜಪೂತ್ ಹಾಗೂ ವೆಂಕಟೇಶ್ ಪ್ರಸಾದ್ ಅವರ ಹೆಸರುಗಳೂ ಇದೆ.
ಮಂಗಳವಾರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಿಶೇಷ ಪೀಠ, ಬಿಸಿಸಿಐ ಹಾಗೂ ಐಪಿಎಲ್ ಎರಡರಲ್ಲೂ ಅಧಿಕಾರ ವಹಿಸಿಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ.
ಹೀಗಾಗಿ ಕ್ರೀಡೆಯ ಹಿತಾಸಕ್ತಿ ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತ್ತು. ಅಲ್ಲದೆ, ಬಿಸಿಸಿಐ ಜೊತೆಗೆ ಐಪಿಎಲ್ ನಲ್ಲೂ ಆರ್ಥಿಕ ಲಾಭ ಪಡೆಯುವ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ತಿಳಿಸಿತ್ತು.
ಕ್ರೀಡೆಯಲ್ಲಿ ಸ್ವಚ್ಛತೆ ಕಾಪಾಡಬೇಕಾದರೆ, ಹಿತಾಸಕ್ತಿಯ ಸಂಘರ್ಷ ತೊಲಗಬೇಕು. ಅಧಿಕಾರಿಗಳು ತಂಡದ ಮಾಲೀಕತ್ವವನ್ನು ಹೊಂದಿರದ್ದರೆ, ಏನು ಆಗುವುದಿಲ್ಲ. ಒಂದು ವೇಳೆ ತಂಡವೊಂದು ಹೊರಗೆ ಹೋದರೆ, ಟೂರ್ನಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಹಿತಾಸಕ್ತಿಯ ಸಂಘರ್ಷವನ್ನು ಸಮರ್ಥಿಸಿಕೊಳ್ಳಲು, ಕಪಿಲ್ ಸಿಬಲ್ ಅವರು ಡಿ.2ರಂದು ಬಿಸಿಸಿಐ ಹಾಗೂ ಐಪಿಎಲ್ ನಲ್ಲಿ ಭಾರತದ ಮಾಡಿ ಆಟಗಾರರಾದ ಗಾವಸ್ಕರ್, ರವಿಶಾಸ್ತ್ರಿ ಹಾಗೂ ಗಂಗೂಲಿಯವರೂ ಅಧಿಕಾರ ಹೊಂದಿರುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು.
ಅಲ್ಲದೆ ಅನಿಲ್ ಕುಂಬ್ಳೆ, ರಜಪೂತ್, ಶ್ರೀಕಾಂತ್ ಹಾಗೂ ಆರ್ಸಿಬಿ ತಂಡದ ಮಾಲೀಕ ವಿಜಯ್ ಮಲ್ಯ ಅವರ ಹೆಸರನ್ನು ಸೂಚಿಸಿದ್ದರು. ಬುಧವಾರ ವಾದ-ಪ್ರತಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.
Advertisement