

ಬುಡಕಟ್ಟು ಜನಾಂಗವೆಂದರೆ ನಮ್ಮ ಕಣ್ಣಿಗೆ ಕಾಣುವ ದೃಶ್ಯವಿಷ್ಟೇ... ಕಾಡಿನ ಬೆಟ್ಟ-ಗುಡ್ಡಗಳಲ್ಲಿ ವಾಸವಿರುವವರು, ಕಾಡುಪ್ರಾಣಿಗಳನ್ನು ಬೇಟೆಯಾಡುವವರು... ಅಂತ. ಕಾಡಿನಾಚೆಯ ವಿಷಯಗಳು ಅವರಿಗೆ ಗೊತ್ತೇ ಇರುವುದಿಲ್ಲ. ಆದರೆ, ಒಂದು ಅಚ್ಚರಿ ನ್ಯೂಸ್ ಕೇಳಿ... ಅವರು ಚೆನ್ನಾಗಿ ಫುಟ್ಬಾಲ್ ಬಲ್ಲರು!
ಬ್ರೆಜಿಲ್ನಲ್ಲಿರುವ ಅಮೆಜೋನ್ ಬುಡಕಟ್ಟು ಜನಾಂಗ ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೆ ಸಡ್ಡು ಹೊಡೆದಿದೆ. ಅಮೆಜೋನ್ ಅರಣ್ಯದಲ್ಲಿರುವ ಕ್ಸಿಂಗು ನದಿಯ ಪೂರ್ವದಲ್ಲಿ ವಾಸಿಸುತ್ತಿರುವ ಈ ಬುಡಕಟ್ಟು ಜನಾಂಗ, ತಮ್ಮ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಪಾಲ್ಗೊಳ್ಳುವಂತೆ ಇಂಗ್ಲೆಂಡ್ ತಂಡದ ಮ್ಯಾನೇಜರ್ ರಾಯ್ ಹಾಗ್ಸನ್ಗೆ ಪತ್ರ ಬರೆಯುವ ಮೂಲಕ ಮಾಜಿ ವಿಶ್ವ ಚಾಂಪಿಯನ್ ತಂಡಕ್ಕೆ ಸವಾಲೊಡ್ಡಿದ್ದಾರೆ.
ಬ್ರೆಜಿಲ್ ವಿಶ್ವಕಪ್ ಮುಗಿದ ನಂತರ ಇಂಗ್ಲೆಂಡ್ ತಂಡದೊಂದಿಗೆ ಈ ಮ್ಯಾಚ್ ಇರುತ್ತದಂತೆ. 'ನಾವು ಅರಣ್ಯದಲ್ಲಿ ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ನೋಡಲು ಇದು ಇಂಗ್ಲೆಂಡ್ ತಂಡಕ್ಕೆ ಒಂದು ಸುವರ್ಣಾವಕಾಶ. ನಾವು ಫುಟ್ಬಾಲ್ನ ಕಟ್ಟಾಭಿಮಾನಿಗಳಾಗಿದ್ದು ಇಂಗ್ಲೆಂಡ್ ತಂಡದ ವಿರುದ್ಧ ಆಡಲು ಕಾತರದಿಂದ ಕಾಯುತ್ತಿದ್ದೇವೆ' ಎನ್ನುತ್ತಾರೆ ಆ ಕಾಡುಜನ.
ಆದರೆ, ಈ ಆಹ್ವಾನ ಸ್ವೀಕರಿಸಿರುವ ಕುರಿತು ಇಂಗ್ಲೆಂಡ್ ತಂಡ ಇದುವರೆಗೆ ಏನೇನೂ ಬಾಯಿಬಿಟ್ಟಿಲ್ಲ.