ರೊನಾಲ್ಡೋ ರೋಮಾಂಚನ

ಬ್ರೆಜಿಲ್‌ನ ವಿಶ್ವಕಪ್‌ನಲ್ಲಿ ಯಾವ ತಂಡ ಗೆಲ್ಲಬಹುದು, ಯಾವ ಆಟಗಾರ ಎಷ್ಟು ಗೋಲು ಹೊಡೆಯಬಹುದು...
ರೊನಾಲ್ಡೋ ರೋಮಾಂಚನ
Updated on: 

ಬ್ರೆಜಿಲ್‌ನ ವಿಶ್ವಕಪ್‌ನಲ್ಲಿ ಯಾವ ತಂಡ ಗೆಲ್ಲಬಹುದು, ಯಾವ ಆಟಗಾರ ಎಷ್ಟು ಗೋಲು ಹೊಡೆಯಬಹುದು, ಯಾವ ತಂಡ ಡಾರ್ಕ್ ಹಾರ್ಸ್ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದರೆ, ಫ್ಯಾಶನ್ ದುನಿಯಾ ಮಾತ್ರ ಯಾರ ಕೂದ್ಲು ಚಂದ, ಯಾರ ಮುಖ ಚಂದ, ಯಾರು ಗ್ಲಾಮರಸ್, ಯಾರನ್ನು ಹುಡುಗೀರು ಹೆಚ್ಚು ಲೈಕ್ ಮಾಡ್ತಾರೆ ಎಂದೆಲ್ಲಾ ಕೂಡಿಸಿ, ಕಳೆದು ಮಾಡುತ್ತಿದ್ದಾರೆ. ಅಯ್ಯೋ ಹಾಲಿವುಡ್ ನಟಿಯರಂತೆ, ಮಿಸ್ ಯುನಿವರ್ಸ್ ಸ್ಪರ್ಧೆಗಳಂತೆ ಇಲ್ಲೂ ಸ್ಪರ್ಧೆ ಇದೆ ಸ್ವಾಮಿ. ಈ ಲೆಕ್ಕಾಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿದಾತ ಕ್ರಿಸ್ಟಿಯಾನೋ ರೊನಾಲ್ಡೊ ಗೊತ್ತಾ?
ಯಾರು ನಿಮ್ಮ ಫುಟ್ಬಾಲ್ ಹೀರೋ? ಹೀಗೊಂದು ಪ್ರಶ್ನೆಯನ್ನು ಯಾವುದಾದರೂ ಫುಟ್ಬಾಲ್ ಪ್ರೇಮಿಗೆ ಕೇಳಿ. ಹೆಚ್ಚಿನವರ ಬೆರಳು ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಹೊರಗೂ ಪಳಗಿದ ಆಟಗಾರರ ಕಡೆಗೇ ತೋರುತ್ತದೆ. ಹಾಗಾಗಿ ಗ್ಲ್ಯಾಮರ್ ಗ್ರಾಮರ್ ತಿಳಿಯದ ಆಟಗಾರ ಕೇವಲ ಮೈದಾನಕ್ಕಷ್ಟೇ ಸೀಮಿತವಾದರೆ, ತಿಳಿದವ ಫ್ಯಾಶನ್ ಲೋಕದ ಕಣ್ಮಣಿಯಾಗುತ್ತಾನೆ. ಹೀಗಾಗಿ ತಂಡ ಫಾರ್ಮ್‌ನಲ್ಲಿ ಇರಲಿ ಬಿಡಲಿ, ಇಲ್ಲಿ ಗಟ್ಟಿಯಾಗಿ ಕಾಲು ನೆಟ್ಟವ ಮಾತ್ರ ಸದಾ ಚಲಾವಣೆಯಲ್ಲಿರುವ ನಾಣ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಡೇವಿಡ್ ಬೆಕಂ.
ಉತ್ತಮ ಫುಟ್ಬಾಲಿಗನಾದ ಡೇವಿಡ್ ಬೆಕಂ ಏನೂ ಪೀಲೇ, ಮರಡೋನಾ, ಜಿದಾನೆ ಥರ ತನ್ನ ದೇಶಕ್ಕೆ ಫುಟ್ಬಾಲ್ ಕಿರೀಟಗಳನ್ನು ತೊಡಿಸಿದವನಲ್ಲ. ಇಂಗ್ಲೆಂಡ್ ತಂಡ ಆತನನ್ನು ನೆಚ್ಚಿ ವಿಶ್ವಕಪ್ ಅಂಗಣಕ್ಕೆ ಇಳಿದಿಲ್ಲ. ಆದರೂ ಪ್ರತಿ ವಿಶ್ವಕಪ್ ನಡೆಯುವಾಗಲೂ ಆತ ಸುದ್ದಿಯಲ್ಲಿರುತ್ತಾನೆ. ಈತ ಪ್ರಪಂಚದ ಯಾವ ಮೂಲೆಯಲ್ಲೇ ಇರಲಿ, ಆಡುತ್ತಿರಲಿ ಇಲ್ಲಾ ಸುಮ್ಮನೇ ನಿಂತು ನೋಡುತ್ತಿರಲಿ ಜನ ಈತನ ಹಿಂದೆ ಬೀಳುತ್ತಿದ್ದರು. ಆತನಿಗೆ ಮದುವೆಯಾಗಿ ಮಕ್ಕಳಿದ್ದಾರೆಂದು ಗೊತ್ತಿದ್ದರೂ ಹಾಲಿವುಡ್, ಪಾಪ್ ಲಲನೆಯರು ಆತನ ಸ್ನೇಹಕ್ಕೆ ಹಪಹಪಿಸುತ್ತಿದ್ದರು. ಆತ ಎಲ್ಲೇ ಸುತ್ತುತ್ತಿರಲಿ ಪಾಪ್ ತಾರೆಗಳು ಈತನ ಸುತ್ತ ಸುತ್ತುತ್ತಿದ್ದರು. ಇಂದಿಗೂ ಜಾಹಿರಾತು ಪ್ರಪಂಚದ ಫೇವರಿಟ್ ಆತ. ಫುಟ್ಬಾಲ್ ಅಂಗಣದಲ್ಲಿ ಕಾಲ್ಕಿತ್ತು ವರ್ಷಗಳೇ ಕಳೆದಿದ್ದರೂ ಆತನ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಸುದ್ದಿಯಲ್ಲಿಲ್ಲದಿದ್ದರೆ ಆತ ಬೆಕಂ ಅಲ್ಲ. ಅನ್ನುವಷ್ಟು ಪ್ರೀತಿ ಮಾಧ್ಯಗಳಿಗೆ ಆತನ ಮೇಲೆ.
ಗ್ಲ್ಯಾಮರ್ ಲೋಕದ ಲಾಡ್ಲಾ ಆಗಬೇಕಾದರೆ ಕೇವಲ ಕಾಲ್ಚಳಕವಷ್ಟೇ ಸಾಕಾಗುವುದಿಲ್ಲ. ಮೈದಾನದ ಒಳಗೂ ಹೊರಗೂ ತೀಕ್ಷ್ಣ ನೋಟ, ಆಕರ್ಷಕ ಮೈಕಟ್ಟು, ಮೈ ತುಂಬಾ ಟ್ಯಾಟೂ, ಫ್ಯಾಶನ್ ಜಗತ್ತಿನ ಪರಿಜ್ಞಾನ ಎಲ್ಲವೂ ಮುಖ್ಯ. ಬೆಕಂ ಇದ್ಯಾವುದರಲ್ಲೂ ಕಮ್ಮಿಯಿಲ್ಲ.
ಬೆಕಂ ನಂತ್ರ ಯಾರು?
ಆದರೆ, ಬೆಕಂ ನಂತ್ರ ಯಾರು ಅಂತ ತಲೆಕೆಡಿಸಿಕೊಂಡಿದ್ದ ಫ್ಯಾಶನ್ ಲೋಕಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ.  ಫ್ಯಾಶನ್ ದುನಿಯಾದಲ್ಲಿ ಉಳಿದೆಲ್ಲಾ ಆಟಗಾರರನ್ನು ಹಿಂದಿಕ್ಕಿ ಬಹಳ ಮುಂದೆ ಸಾಗಿರುವ ಆಟಗಾರ ಖಂಡಿತವಾಗಿಯೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ. ವಿಶ್ವಕಪ್ ಯಾನದಲ್ಲಿ ಈಗಾಗಲೇ ಜರ್ಮನಿ ವಿರುದ್ಧ 4-0 ಗೋಲುಗಳಿಂದ ಪೋರ್ಚುಗಲ್ ಸೋತಿದ್ದರೂ ಜನ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರೊನಾಲ್ಡೊ ಅಭಿಮಾನಿಗಳೂ ಇಳಿದಿಲ್ಲ. ಕಾರಣ ಆತ ಫ್ಯಾಶನ್ ಲೋಕಕ್ಕೆ ಹೇಳಿ ಮಾಡಿಸಿದ ಹುಡುಗ ಎಂಬುದು ಪ್ರಖ್ಯಾತ ಫ್ಯಾಶನ್ ಡಿಸೈನರ್‌ಗಳ ಅಂಬೋಣ.

- ಗಣಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com