ಶಿಸ್ತಿನ ಸಾರ್ಟರ್

ಶಿಸ್ತಿನ ಸಾರ್ಟರ್
Updated on: 

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯುತ್ತಿತ್ತು. ಟ್ರ್ಯಾಕ್‌ನಲ್ಲಿ ಬಾಲಕಿಯರು ಓಡಲು ಸಿದ್ಧವಾಗಿದ್ದರು. ಆದರೆ, ಖ್ಯಾತ ಓಟಗಾರ್ತಿ ಪಿ.ಟಿ. ಉಷಾ ಕಣ್ಣೀರಿಡುತ್ತಾ ವೇದಿಕೆಯತ್ತ ಸಾಗಿದ್ದರು! ಇದನ್ನು ನೋಡಿದ ಗಣ್ಯರು ಚಿಂತೆಗೀಡಾಗಿ, ಉಷಾಗೆ ಏನಾಯಿತು? ಯಾರು ಅವಮಾನಿಸಿದರು? ಅವರ ಕಣ್ಣೀರಿಗೆ ಕಾರಣವೇನು? ಎಂದು ಪ್ರಶ್ನೆ ಹಾಕ ತೊಡಗಿದರು.
ತಮ್ಮದೇ ಗರಡಿಯಲ್ಲಿ ಪಳಗಿದ ಬಾಲಕಿಯನ್ನು ಸ್ಪರ್ಧೆಗೆ ಕರೆದುಕೊಂಡು ಬಂದಿದ್ದ ಉಷಾ, ನಿಷೇಧಿತ ಪ್ರದೇಶದಲ್ಲಿ ಪ್ರವೇಶಿಸಿದ್ದಲ್ಲದೆ, ಬಾಲಕಿಯರ ಓಟದ ಸ್ಪರ್ಧೆಗಳು ವಿಳಂಬವಾಗಲು ಕಾರಣವಾಗಿದ್ದರು. ಅದಕ್ಕೆ 'ಯಾರು ನೀನು? ಇಲ್ಲಿಗೇಕೆ ಬಂದೆ, ನಡಿ ಆಚೆ' ಎಂದು ಗತ್ತಿನ ಧ್ವನಿಯಲ್ಲೇ ಚಾಂಪಿಯನ್‌ಶಿಪ್‌ಗೆ ಸ್ಟಾರ್ಟರ್ ಆಗಿದ್ದ ರಾಮಣ್ಣ ಗುಡುಗಿದ್ದನ್ನು ವಿವರಿಸಿ ವೇದಿಕೆಯ ಮೇಲಿದ್ದ ಗಣ್ಯರ ಕೋಪವನ್ನು ತಣ್ಣಗೆ ಮಾಡುವಲ್ಲಿ ಅಲ್ಲೇ ಇದ್ದ ಅನುಭವಿ ಸಿಬ್ಬಂದಿಗೆ ಸಾಕು ಬೇಕಾಗಿತ್ತು.
ಹೌದು, ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್ ಆಗಿದ್ದರೂ, ತಮ್ಮದೇ ಕಟು ಶಿಸ್ತಿನಿಂದ ಹೆಸರು ಮಾಡಿರುವ ಸ್ಟಾರ್ಟರ್ ರಾಮಣ್ಣ ಅವರ ಕತೆ ಇದು.
'ನನ್ನ ಜೀವನದಲ್ಲೇ ನನಗೆ ಇಂಥ ಮಾತುಗಳನ್ನು ಯಾರೂ ಆಡಿರಲಿಲ್ಲ' ಎಂದು ಅಂದು ನೊಂದುಕೊಂಡಿದ್ದ ಉಷಾ ಇಂದಿಗೂ ಯಾವುದೇ ಟ್ರ್ಯಾಕ್ ಮತ್ತು ಫಿಲ್ಡ್ ಚಾಂಪಿಯನ್‌ಶಿಪ್ ವೇಳೆ ರಾಮಣ್ಣ ಸ್ಟಾರ್ಟರ್ ಆಗಿದ್ದರೆ ಹತ್ತಿರ ಸುಳಿಯದೆ, ದೂರದಿಂದಲೇ ವೀಕ್ಷಿಸುತ್ತಾರಂತೆ. 'ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನಿಯಮಗಳಿಗೆ ಬದ್ಧರಾಗಿರಬೇಕು. ಕ್ರೀಡಾಸ್ಫೂರ್ತಿ ಮೀರುವುದು ದುರ್ವತನೆ' ಎನ್ನುತ್ತಾರೆ 1989ರ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನ ಸ್ಟಾರ್ಟರ್ ರಾಮಣ್ಣ.
ಮಹತ್ವದ ಅಂಶ
'ರಾಜ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್ ಆಗಿರಲಿ, ಅಥ್ಲೀಟ್‌ಗಳು ತುಂಬಾ ಕಷ್ಟಪಟ್ಟು ತಯಾರಿ ನಡೆಸಿಕೊಂಡು ಬಂದಿರುತ್ತಾರೆ. ಅವರು ಪಟ್ಟ ಕಷ್ಟ ಕ್ಷಣ ಮಾತ್ರದಲ್ಲಿ ವ್ಯರ್ಥವಾಗಬಾರದು. ಹಾಗಾಗಿ ಯಾವುದೇ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್ ನಡೆಯಲಿ, ಸ್ಟಾರ್ಟ್ ಆದೇಶ ನೀಡುವ ಮಾಡುವ ಮೊದಲು ಅಥ್ಲೀಟ್‌ಗಳಿಗೆ ಎಲ್ಲ ರೀತಿಯ ಮಾಹಿತಿ ನೀಡಬೇಕು. ಅಲ್ಲದೆ, ಅವರಿಗೆ ಧೈರ್ಯ ಬರುವಂತೆ ನೋಡಿಕೊಂಡ ಮೇಲಷ್ಟೇ 'ಆನ್ ಯುವರ್ ಮಾರ್‌' ಆದೇಶದೊಂದಿಗೆ ಗನ್ ಶಬ್ದ ಮಾಡಬೇಕು' ಎನ್ನುತ್ತಾರೆ ರಾಮಣ್ಣ.
ಗಳಿಕೆ ಹೇಗೆ?
ಕ್ರೀಡೆಗೆ ಹೆಚ್ಚು ಮಹತ್ವ ಸಿಗುತ್ತಿರುವ ಇಂದು ಸ್ಟಾರ್ಟರ್‌ಗಳಿಗೂ ಗೌರವ ದೊರಕುತ್ತಿದೆ. ಯಾವುದೇ ಚಾಂಪಿಯನ್‌ಶಿಪ್‌ಗೆ ಹೋದರೆ, ದಿನಕ್ಕೆ 1000ದಿಂದ 1500 ರು. ವರೆಗೂ ಗಳಿಕೆ ಮಾಡಬಹುದು. ಆದರೆ, ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಆಯಾ ಸಂಸ್ಥೆಗಳು ಗೌರವ ಸಂಭಾವನೆಯನ್ನು ನಿಗದಿ ಮಾಡಿರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com