ವೆಂಗ್‌ಸರ್ಕರ್‌ಗೆ ಒಲಿದ ಸಿಕೆ ನಾಯ್ಡು ಪ್ರಶಸ್ತಿ

ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಅವರಿಗೆ ಮಂಗಳವಾರ ಸಿಕೆ ನಾಯ್ಡು ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ (ಸಾಂದರ್ಭಿಕ ಚಿತ್ರ)
ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ (ಸಾಂದರ್ಭಿಕ ಚಿತ್ರ)

ಮುಂಬೈ: ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಅವರಿಗೆ ಮಂಗಳವಾರ ಸಿಕೆ ನಾಯ್ಡು ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಭಾರತ ತಂಡದ ಮಾಜಿ ನಾಯಕ ಮತ್ತು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಅವರು 2013-14ನೇ ಸಾಲಿನ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡುವ ಪ್ರತಿಷ್ಟಿತ ಮತ್ತು ಅತಿ ದೊಡ್ಡ ಗೌರವಕ್ಕೆ ದಿಲೀಪ್ ವೆಂಗ್‌ಸರ್ಕರ್ ಅವರು ಪಾತ್ರರಾಗಿದ್ದಾರೆ. ಬಿಸಿಸಿಐನಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ವೆಂಗ್‌ಸರ್ಕರ್ ಅವರು ಸೇವೆ ಸಲ್ಲಿಸಿದ್ದು, ಭಾರತ ತಂಡದ ನಾಯಕ ಮತ್ತು ತಂಡದ ಆಯ್ಕೆದಾರರ ಮಂಡಳಿ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ದಕ್ಷ ನಾಯಕರೆಂಬ ಖ್ಯಾತಿಗಳಿಸಿದ್ದ ವೆಂಗ್‌ಸರ್ಕರ್ ಅವರಿಗೆ ಅರ್ಹವಾಗಿಯೇ ಸಿಕೆ ನಾಯ್ಡು ಪ್ರಶಸ್ತಿ ಒಲಿದು ಬಂದಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವೆಂಗ್‌ಸರ್ಕರ್ ಅವರು, ಭಾರತೀಯ ಕ್ರಿಕೆಟ್ ರಂಗದ ಅತ್ಯುನ್ನತ ಪ್ರಶಸ್ತಿ ಎಂದೇ ಬಿಂಬಿತವಾಗಿರುವ ಸಿಕೆ ನಾಯ್ಡು ಪ್ರಶಸ್ತಿ ತಮಗೆ ಬಂದಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ.

ಇದೇ ನವೆಂಬರ್ 21 ಶುಕ್ರವಾರದಂದು ಮುಂಬೈನಲ್ಲಿ ನಡೆಯಲಿರುವ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೆಂಗ್‌ಸರ್ಕರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿಯು ಒಂದು ಸ್ಮರಣಿಕೆ ಮತ್ತು 25 ಲಕ್ಷ ರು.ಚೆಕ್ ಅನ್ನು ಒಳಗೊಂಡಿದೆ.

ಒಟ್ಟು 116 ಟೆಸ್ಟ್ ಪಂದ್ಯಗಳನ್ನು ಆಡಿರುವ ವೆಂಗ್‌ಸರ್ಕರ್ ಅವರು, 6868ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 35 ಅರ್ಧಶತಕಗಳು ದಾಖಲಾಗಿವೆ. ಇನ್ನು 129 ಏಕದಿನ ಪಂದ್ಯಗಳನ್ನಾಡಿರುವ ಅವರು ಒಟ್ಟು 3508 ರನ್ ಗಳಿಸಿದ್ದು, 1 ಶತಕ 23 ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com