
ಬೆಂಗಳೂರು: ತನ್ನ ನೆಲದಲ್ಲಿ ವಿಶ್ವ ಪ್ರಶಸ್ತಿ ಎತ್ತಿಹಿಡಿಯಬೇಕೆಂಬ ಆಸೆ ಹೊಂದಿದ್ದ ಪಂಕಜ್ ಆಡ್ವಾಣಿ ಕನಸು ಭಗ್ನಗೊಂಡಿದೆ. ಹಾಗೆಯೇ, ಪಂಕಜ್‌ನಂತೆ ಕನಸು ಕಟ್ಟಿಕೊಂಡಿದ್ದ ಭಾರತದ ಇತರೆ ಆಟಗಾರರ ಕನಸೂ ಕೂಡ ನುಚ್ಚುನೂರಾಗಿದೆ.
ಪಂಕಜ್ ಸೇರಿದಂತೆ ಇತರೆ ಆಟಗಾರರೂ ಕ್ವಾರ್ಟರ್‌ಫೈನಲ್ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸುವುದರೊಂದಿಗೆ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಳ್ಳುಂತಾಗಿದೆ. ಶುಕ್ರವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಎಂಟರ ಘಟ್ಟದ ಸುತ್ತಿನ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಪಂಕಜ್ ಆಡ್ವಾಣಿ ಹಾಗೂ ಮನನ್ ಚಂದ್ರಾ, ಮಹಿಳೆಯರ ವಿಭಾಗದಲ್ಲಿ ಚಿತ್ರಾ ಮಗಿಮೈರಾಜ್ ಹಾಗೂ ಮಾಸ್ಟರ್ಸ್ ವಿಭಾಗದಲ್ಲಿ ರಾಫತ್ ಹಬೀಬ್ ಹಾಗೂ ಶ್ರೀನಿವಾಸ್ ಮೂರ್ತಿ ಬಿ.ಎ ವುರುದ್ಧ ಸೋಲನುಭವಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಆಟಗಾರರು ಹೊರ ಬಿದ್ದಿದ್ದಾರೆ.
ಪಂಕಜ್‌ಗೆ ಯಾನ್ ಟಾಂಗ್: ಪ್ರಸಕ್ತ ಸಾಲಿನಲ್ಲಿ ನಾಲ್ಕು ಪ್ರಶಸ್ತಿಯನ್ನು ಗೆದ್ದು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಪಂಕಜ್ ಆಡ್ವಾಣಿ, ಈ ಟೂರ್ನಿಯ ಹಾಟ್ ಫೇವರಿಟ್ ಆಗಿದ್ದರು. ಪಂಕಜ್‌ಗೆ ಕಠಿಣ ಸವಾಲು ನೀಡಿದ ಚೀನಾ ಯುವ ಪ್ರತಿಭೆ ಯಾನ್ ಬಂಗ್ಟಾವ್ 6-4(38-63, 47-75, 107-00, 68-10, 60-16, 4-83, 89-24, 40-67, 71-26, 59-40) ಫ್ರೇಮ್‌ಗಳ ಅಂತರದಲ್ಲಿ ಸೋಲನುಭವಿಸಿದರು.
ಚಿತ್ರಾಗೆ ನಿರಾಸೆ: ಕರ್ನಾಟಕದ ಭರವಸೆಯ ಆಟಗಾರ್ತಿ ಚಿತ್ರಾ ಮಗಿಮೈರಾಜ್, ಬೆಲ್ಜಿಯಂ ಪ್ರಬಲ ಆಟಗಾರ್ತಿ ವೆಂಡಿ ಜೇನ್ಸ್ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ಪಂದ್ಯದ ಆರಂಭಿಕ ಎರಡು ಫ್ರೇಮ್‌ಗಳಲ್ಲಿ ಉಭಯ ಆಟಗಾರ್ತಿಯರು ತಲಾ ಒಂದು ಫ್ರೇಮ್ ಅನ್ನು ತಮ್ಮದಾಗಿಸಿಕೊಂಡ ವೆಂಡಿ, ಚಿತ್ರಾ ವಿರುದ್ಧ ಮುನ್ನಡೆ ಸಾಧಿಸಿದರು.
ಮಾರ್ಗನ್‌ಗೆ ಮಣಿದ ಮೂರ್ತಿ: ಮಾಸ್ಟರ್ಸ್ ವಿಭಾಗದಲ್ಲಿ ವೇಲ್ಸ್ ಆಟಗಾರ ಡಾರೆನ್ ಮಾರ್ಗನ್, ಭಾರತದ ಶ್ರೀನಿವಾಸ ಮೂರ್ತಿ ವಿರುದ್ಧ 4-0(58-31, 86-34, 61-52, 84-20) ಸುಲಭ ಗೆಲವು ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಪ್ರಾಬಲ್ಯ ಮೆರೆದ ಮಾರ್ಗನ್ ಅಬ್ಬರಕ್ಕೆ ಶ್ರೀನಿವಾಸ್ ಮೂರ್ತಿ ಪ್ರತಿರೋಧ ನೀಡಲು ಸಾಧ್ಯವಾಗಲಿಲ್ಲ. ಪಂದ್ಯದ ಆರಂಭಿಕ ನಾಲ್ಕು ಸೆಟ್‌ಗಳಲ್ಲೂ ಶ್ರೀನಿವಾಸ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡದ ಮಾರ್ಗನ್, ಅರ್ಹ ಗೆಲುವು ದಾಖಲಿಸಿದರು.
ರಾಫತ್ ಹಬೀಬ್ ಸಹ ತಮ್ಮ ಎದುರಾಳಿ ಥಾಯ್ಲೆಂಡ್‌ನ ಚಚಾರ್ಟ್ ಟ್ರೇರತ್ನ ಪ್ರಡಿಟ್‌ಗೆ 3-4(28-94, 93-27, 74-52, 67-28, 58-68, 56-67, 56-45) ಪ್ರಬಲ ಪೈಪೋಟಿ ನೀಡಿದರೂ, ಅಂತಿಮ ಫ್ರೇಮ್‌ನಲ್ಲಿ ಮುಗ್ಗರಿಸುವ ಮೂಲಕ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.
-ಸೋಮಶೇಖರ್ ಪಿ.ಭದ್ರಾವತಿ
Advertisement