
ಮುಂಬೈ: ಪುಣೆ ಸಿಟಿ ಎಫ್‌ಸಿ ಹಾಗೂ ಅಟ್ಲೆಟಿಕೊ ಡಿ ಕೋಲ್ಕತಾ ನಡುವೆ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಛದ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲುಗಳಿಸಿದ್ದರಿಂದ ಪಂದ್ಯ 1-1ರಲ್ಲಿ ಡ್ರಾ ಆಯಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಗೋಲಿನ ಖಾತೆ ತೆರೆದಿದ್ದು ಕೋಲ್ಕತಾ ತಂಡ. ಪಂದ್ಯದ 11ನೇ ನಿಮಿಷದಲ್ಲಿ ಪೋಡನಿ ಅವರು ಗಳಿಸಿದ ಗೋಲ್‌ನ ಸಹಾಯದಿಂದ ಕೋಲ್ಕತಾ, ಪುಣೆ ವಿರುದ್ಧ 1-0 ಅಂತರದ ಮುನ್ನಡೆ ಪಡೆದುಕೊಂಡಿತು.
ಇದಾದ ನಂತರ, ಪಂದ್ಯದ 45ನೇ ನಿಮಿಷದಲ್ಲಿ ಪುಣೆ ಸಹ ತನ್ನ ಗೋಲ್‌ನ ಖಾತೆ ತೆರೆಯಿತು. ಕ್ಯಾಟ್ಸೊರೆನಿಸ್ ಅವರು 45ನೇ ನಿಮಿಷದಲ್ಲಿ ದಾಖಲಿಸಿದ ಗೋಲು, ಕೋಲ್ಕತಾ ವಿರುದ್ಧ ಸಮಬಲ ಸಾಧಿಸಲು ಪುಣೆಗೆ ನೆರವಾಯಿತು.
ಎರಡೂ ತಂಡಗಳು ಸಮಬಲ ಸಾಧಿಸಿದ ನಂತರ, ಪುನಃ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಕೊನೆಯವರೆಗೂ ಅದು ಸಾಧ್ಯವಾಗಲೇ ಇಲ್ಲ. ಅಂತ್ಯದವರೆಗೂ ಇದೇ ಸಮಬಲ ಮುಂದುವರಿದಿದ್ದರಿಂದ ಪಂದ್ಯ ಡ್ರಾನಲ್ಲೇ ಮುಕ್ತಾಯವಾಯಿತು.
ಇದರಿಂದಾಗಿ ಎರಡೂ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದಿದ್ದು, ಅಂಕಪಟ್ಟಿಯಲ್ಲಿ ಕೋಲ್ಕತಾ ಎರಡನೇ ಸ್ಥಾನದಲ್ಲಿದ್ದರೆ, ಪುಣೆ 7ನೇ ಸ್ಥಾನದಲ್ಲಿದೆ.
Advertisement