ಭಾರತ-ಕೊರಿಯಾ ಡ್ರಾಗೆ ಸಮಾಧಾನ

ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತ ತಂಡದ ಆಟಗಾರರು 24ನೇ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಕೊರಿಯಾ ಎದುರು 2-2 ಗೋಲುಗಳಿಂದ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿದ್ದಾರೆ...
ಭಾರತ-ಕೊರಿಯಾ ಡ್ರಾಗೆ ಸಮಾಧಾನ

ಇಫೋ: ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತ ತಂಡದ ಆಟಗಾರರು 24ನೇ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಕೊರಿಯಾ ಎದುರು 2-2 ಗೋಲುಗಳಿಂದ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿದ್ದಾರೆ.

ಭಾನುವಾರ ನಡೆದ ಒಟ್ಟು 6 ರಾಷ್ಟ್ರಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಉತ್ತಮ ಆಟವನ್ನೇ ಪ್ರದರ್ಶಿಸಿತು. ಆದರೆ, ಅಂತಿಮವಾಗಿ ಸಮಗೌರವದ ಹೋರಾಟದೊಂದಿಗೆ ತನ್ನ ಅಭಿಯಾನಕ್ಕೆ ಚಾಲನೆ ನೀಡಿದಂತಾಯಿತು. ಭಾರತ ತಂಡದ ಪರ ನಿಕ್ಕಿನ್ ತಿಮ್ಮಯ್ಯ 10ನೇ ನಿಮಿಷ ಮತ್ತು ವಿ. ಆರ್. ರಘುನಾಥ್ 56ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಕೊರಿಯಾ ತಂಡಕ್ಕೆ ಹ್ಯೂಸಂಗ್ ಹ್ಯೂನ್ 24ನೇ ನಿಮಿಷ ಮತ್ತು ಸ್ಯೂಂಗ್ ಹೂನ್ ಲೀ 53ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿ ಸಮಸ್ಥಿತಿಯಲ್ಲಿದ್ದವು. ಆಟ ಪ್ರಾರಂಭವಾಗಿ ಹತ್ತು ನಿಮಿಷ ಕಳೆಯುವಷ್ಟರಲ್ಲಿ ಭಾರತ ತಂಡ ನಿಕ್ಕಿನ್ ತಿಮ್ಮಯ್ಯ ಮೂಲಕ ಗೋಲಿನ ಖಾತೆ ತೆರೆದು 1-0 ಮುನ್ನಡೆಯೊಂದಿಗೆ ಪಂದ್ಯದಲ್ಲಿ ಶುಭಾರಂಭ ಮಾಡಿತು.ಆದರೆ, ಈ ಪ್ರಭುತ್ವವನ್ನು ಹೆಚ್ಚು ಸಮಯ ಉಳಿಸಿಕೊಂಡು ಬರಲು ಭಾರತದ ಆಟಗಾರರು ವಿಫಲರಾದರು.

ಮುಂದಿನ 14 ನಿಮಿಷಗಳ ಆಟ ಕಳೆಯುವಷ್ಟರಲ್ಲಿ ಎದುರಾಳಿ ತಂಡಕ್ಕೆ ಗೋಲು ಗಳಿಕೆಯ ಅವಕಾಶವನ್ನು ನೀಡಿ ನಿರಾಸೆ ಅನುಭವಿಸಿದರು. ಭಾರತದ ದೌರ್ಬಲ್ಯದ ಲಾಭ ಪಡೆದ ಹ್ಯೂಸಂಗ್ ಹ್ಯೂನ್ ಕೊರಿಯಾ ತಂಡದ ಪರ ಆಕರ್ಷಕ ಗೋಲು ಗಳಿಸಿ ಉಭಯರ ನಡುವಿನ ಹೋರಾಟ 1-1 ಸಮಸ್ಥಿತಿಗೆ ಬರುವಂತೆ ಮಾಡಿದರು. ಪಂದ್ಯದ 18ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅತ್ಯುತ್ತಮ ಅವಕಾಶವೊಂದು ಒದಗಿಬಂದಿತ್ತು. ಆದರೆ, ರಮಣದೀಪ್ ಸಿಂಗ್ ಅವರ ಪ್ರಯತ್ನವನ್ನು ಕೊರಿಯಾ ಆಟಗಾರರು ವಿಫಲಗೊಳಿಸಿದರು.

ಎರಡನೇ ಅವಧಿಯ ಆಟ ಕೂಡ ಕುತೂಹಲ ಕೆರಳಿಸಿತು. ಈ ಸುತ್ತಿನಲ್ಲಿ ಕೊರಿಯಾ ಆಟಗಾರರು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಆಟ ಮುಗಿಯಲು 7 ನಿಮಿಷಗಳು ಉಳಿದಾಗ ಸ್ಯೂಂಗ್ ಹೂನ್ ಲೀ ಗೋಲು ಗಳಿಸಿ ಕೊರಿಯಾ ತಂಡಕ್ಕೆ 2-1 ಗೋಲುಗಳ ಮುನ್ನಡೆ ಒದಗಿಸಿಕೊಟ್ಟು ಗೆಲವಿನ ಆಸೆ ಚಿಗುರಿಸಿದ್ದರು. ಆದರೆ, ಕೇವಲ ಮೂರು ನಿಮಿಷಗಳ ಅಂತರದಲ್ಲಿಯೇ ಭಾರತದ ಆಟಗಾರರು ಹಿನ್ನಡೆ ಅಂತರ ತಗ್ಗಿಸಿಕೊಂಡು ಸೋಲಿನ ಅಪಾಯದಿಂದ ಪಾರಾದರು.

ಈ ಬಾರಿ ರಘುನಾಥ್ ಗೋಲು ಗಳಿಸಿ ಭಾರತ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು.ಈ ಪಂದ್ಯದಲ್ಲಿ ಭಾರತ ತಂಡದ ಪರ ಗೋಲು ಗಳಿಸಿದ ನಿಕ್ಕಿನ್ ತಿಮ್ಮಯ್ಯ ಮತ್ತು ರಘುನಾಥ್ ಈ ಇಬ್ಬರೂ ಆಟಗಾರರೂ ಕರ್ನಾಟಕದವರೇ ಎಂಬುದು ವಿಶೇಷವಾಗಿದೆ.

ಇಂದು ಕಿವೀಸ್ ಎದುರಾಳಿ
ಮೊದಲ ಪಂದ್ಯದಲ್ಲಿ ಡ್ರಾ ಸಾಧನೆಗೆ ತೃಪ್ತಿಪಟ್ಟುಕೊಂಡಿರುವ ಭಾರತ ತಂಡ, ಸೋಮವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ ಗೆಲವು ಪಡೆದಿದೆ.

ಆಸೀಸ್‍ಗೆ ಕೆನಡಾ ಸುಲಭ ತುತ್ತು ದಿನದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 7-0 ಗೋಲುಗಳಿಂದ ಕೆನಡಾ ತಂಡವನ್ನು ಸುಲಭವಾಗಿ ಮಣಿಸಿ ಶುಭಾರಂಭ ಮಾಡಿತು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಗೂ ಎರಡು ಬಾರಿ ವಿಶ್ವಕಪ್ ಗೆದ್ದ ಸಾಧನೆ ಮಾಡಿರುವ ಹಿರಿಯ ಆಟಗಾರ ಜಾಮೀ ಡ್ವೆಯರ್, ಆಸ್ಟ್ರೇಲಿಯಾ ಪರ ಗೋಲು ಗಳಿಸಿದ್ದು ಗಮನಾರ್ಹವಾಗಿತ್ತು. ಅವರು ದಾಖಲೆಯ 322ನೇ ಪಂದ್ಯದಲ್ಲಿ ವೈಯಕ್ತಿಕ 207ನೇ ಗೋಲು ಬಾರಿಸುವ ಮೂಲಕ ತಮ್ಮಲ್ಲಿ ಇನ್ನೂ ಅಗಾಧವಾದ ಸಾಮರ್ಥ್ಯ ಉಳಿದಿದೆ ಎಂಬುದನ್ನು ಸಾಬೀತುಪಡಿಸಿದರು.

ಇದರ ಜೊತೆಗೆ ಡ್ವೆಯರ್ ಅವರು ಈ ಮುನ್ನ ಅತಿ ಹೆಚ್ಚು ಪಂದ್ಯಗಳನ್ನಾಡಿ 2000ನೇ ಸಾಲಿನಲ್ಲಿ ನಿವೃತ್ತಿಯಾಗಿದ್ದ ಜೇ ಸ್ಟಾಸಿ ಅವರ (321 ಪಂದ್ಯ) ದಾಖಲೆಯನ್ನು ಬದಿಗೊತ್ತಿ ಹೊಸ ಇತಿಹಾಸ ಬರೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com