ಡೊನಾಲ್ಡ್ ಗೆ ಬೌಲಿಂಗ್ ಆಯ್ಕೆಯದ್ದೇ ಚಿಂತೆ

ಐಪಿಎಲ್‍ನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ವಿಶ್ವದರ್ಜೆಯ ಬೌಲರ್ ಗಳನ್ನು...
ಅಲನ್ ಡೊನಾಲ್ಡ್ (ಸಂಗ್ರಹ ಚಿತ್ರ)
ಅಲನ್ ಡೊನಾಲ್ಡ್ (ಸಂಗ್ರಹ ಚಿತ್ರ)

ಬೆಂಗಳೂರು: ಐಪಿಎಲ್‍ನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ವಿಶ್ವದರ್ಜೆಯ ಬೌಲರ್ ಗಳನ್ನು ಹೊಂದಿದ್ದು, ಬಲಿಷ್ಠವಾಗಿದೆ ಎಂದು ತಂಡದ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ.

ಆದರೆ, ಇದೇ ವಿಚಾರ ತಂಡದ ಬೌಲಿಂಗ್ ಕೋಚ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಲನ್ ಡೊನಾಲ್ಡ್ ಅವರಿಗೆ ತಲೆಬಿಸಿ ತಂದಿದೆಯಂತೆ..! ತಂಡದಲ್ಲಿ ಅತ್ಯುತ್ತಮ ಬೌಲರ್‍ಗಳೇ ಹೆಚ್ಚಿರುವ ಕಾರಣದಿಂದಾಗಿ, ಯಾವ ಪಂದ್ಯಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಸವಾಲಾಗಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂಡದಲ್ಲಿ ವಿಶ್ವದರ್ಜೆಯ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಆ್ಯಡಮ್ ಮಿಲ್ನೆ, ವರುಣ್ ಅರುಣ್ ಹಾಗೂ ಸೀನ್ ಅಬ್ಬಾಟ್ ಇದ್ದಾರೆ. ಕಳೆದ ತಿಂಗಳು ಮುಕ್ತಾಯವಾದ ವಿಶ್ವಕಪ್‍ನಲ್ಲಿ ಮಿಚೆಲ್ ಸ್ಟಾರ್ಕ್, ಆ್ಯಡಮ್ ಮಿಲ್ನೆ ಮಿಂಚಿದ್ದರು.

ಅಬ್ಬಾಟ್  ಹಾಗೂ ಡೇವಿಡ್ ವೈಯಿಸ್ ಅವರೂ ಸ್ಟಾರ್ಕ್, ಮಿಲ್ನೆಯವರಷ್ಟೇ ಪರಿಣಾಮಕಾರಿ ಬೌಲರ್‍ಗಳು. ಇವರಲ್ಲದೆ, ವರುಣ್ ಅರುಣ್‍ಗೆ ಆಸೀಸ್ ನೆಲದಲ್ಲಿ ಮಿಂಚಿದ ಅನುಭವವಿದೆ. ಆದರೆ, ಈ ಎಲ್ಲರನ್ನೂ ಒಂದೇ ಪಂದ್ಯದಲ್ಲಿ ಬಳಸಿಕೊಳ್ಳುವ ಹಾಗಿಲ್ಲ. ಆಯಾ ಪಂದ್ಯದ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ. ಆದರೆ, ಅದೇ ದೊಡ್ಡ ತಲೆನೋವಿನ ವಿಚಾರವಾಗಿದೆ ಎಂದರು. ಅಂತಿಮ ಹನ್ನೊಂದರಲ್ಲಿ ಬೌಲಿಂಗ್ ವಿಭಾಗದ ಆಯ್ಕೆಯೇ ಚಿಂತೆಯ ವಿಷಯವಾಗಿದೆ. ಎಲ್ಲ ಬೌಲರ್ ಗಳೂ ಸಮರ್ಥರಾಗಿರುವುದರಿಂದ ಅಂತಿಮ ಆಯ್ಕೆ ಒಂದು ಸವಾಲಾಗಿದೆ ಎನ್ನುತ್ತಾರೆ ಮಾಜಿ ಮಧ್ಯಮ  ವೇಗಿ ಅಲನ್ ಡೊನಾಲ್ಡ್.

ಸ್ಟಾರ್ಕ್, ಮಿಲ್ನೆ ಅಲಭ್ಯ
ಫಾರ್ಮ್ ನಲ್ಲಿರುವ ವಿಶ್ವದರ್ಜೆಯ ಆಟಗಾರರಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಕೆಲ ಆತಂಕಗಳು ಮನೆ ಮಾಡಿವೆ. ಕೆಲ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆರ್ ಸಿಬಿ ಆಡಲಿರುವ ಕೆಲವು ಆರಂಭಿಕ ಪಂದ್ಯಗಳಿಂದ ದೂರ ಉಳಿಯುವ ಸೂಚನೆಗಳು ದಟ್ಟವಾಗಿವೆ. ತಂಡದ ಬೌಲಿಂಗ್ ಕೋಚ್ ಅಲನ್ ಡೊನಾಲ್ಡ್ ಅವರೂ ಇದನ್ನು ಅಲ್ಲಗಳೆಯುವುದಿಲ್ಲ.

ತಂಡದಲ್ಲಿನ ಗಾಯದ ಸಮಸ್ಯೆಗಳನ್ನು ಅವರು ಒಪ್ಪಿಕೊಂಡಿದ್ದಾರೆ. ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರೆ, ಮಿಲ್ನೆ ಹಿಮ್ಮಡಿ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಈ ಇಬ್ಬರೂ, ಸಧ್ಯಕ್ಕೆ ವಿಶ್ರಾಂತಿಯಲ್ಲಿಯಲ್ಲಿರುವುದರಿಂದ ಆರ್‍ಸಿಬಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗುವುದು ಸ್ಪಷ್ಟ ಎಂದ ಅವರು, ಇವರಿಬ್ಬರ ಅನುಪಸ್ಥಿತಿಯನ್ನು ವರುಣ್ ಅರುಣ್ ಹಾಗೂ ಸಂದೀಪ್ ವಾರಿಯರ್ ಸಮರ್ಥವಾಗಿ ತುಂಬಲಿದ್ದಾರೆ ಎಂದು ಹೇಳಿದ್ದಾರೆ. ಪ್ರಮುಖ ಬೌಲರ್ ಗಳ ಬದಲಿಗೆ ಆಡುವ ಅವಕಾಶ ಸಿಕ್ಕಾಗ ಸ್ವದೇಶಿ ಆಟಗಾರರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ಅವಕಾಶ ಸಿಗಲಿದೆ ಎಂದು ಡೊನಾಲ್ಡ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com