ವಿಶ್ವ ಚಾಂಪಿಯನ್ ಆಸೀಸ್‍ಗೆ ಮಣ್ಣು ಮುಕ್ಕಿಸಿದ ಭಾರತ

ಕನ್ನಡಿಗ ನಿಕ್ಕಿನ್ ತಿಮ್ಮಯ್ಯ ಗಳಿಸಿಕೊಟ್ಟ ಹ್ಯಾಟ್ರಿಕ್ ಗೋಲುಗಳ ಸಹಾಯದಿಂದ ಭಾರತ ಪುರುಷರ ತಂಡ, ಶನಿವಾರ ನಡೆದ ಅಜ್ಲಾನ್ ಶಾ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಫೋ (ಮಲೇಷ್ಯಾ): ಕನ್ನಡಿಗ ನಿಕ್ಕಿನ್ ತಿಮ್ಮಯ್ಯ ಗಳಿಸಿಕೊಟ್ಟ ಹ್ಯಾಟ್ರಿಕ್ ಗೋಲುಗಳ ಸಹಾಯದಿಂದ ಭಾರತ ಪುರುಷರ ತಂಡ, ಶನಿವಾರ ನಡೆದ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ತಮ್ಮ ಕೊನೆಯ ಲೀಗ್ ಹಾಗೂ ಔಪಚಾರಿಕ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆಮಣ್ಣುಮುಕ್ಕಿಸಿತು.

ಕಾಂಗರೂಗಳ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ ಸರ್ದಾರ್ ನೇತೃತ್ವದ ಪಡೆ, ಟೂರ್ನಿಯ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಸೆಣಸುವ ಅರ್ಹತೆ ಪಡೆದುಕೊಂಡಿತು. ಮಿಂಚಿನ ಪ್ರದರ್ಶನ ನೀಡಿದ ಭಾರತೀಯರು ನಾಲ್ಕು ಕ್ವಾರ್ಟರ್‍ಗಳಲ್ಲಿ ಒಂದೊಂದು ಗೋಲು ಗಳಿಸಿದರು. ಮೊದಲ ನಿಮಿಷದಲ್ಲೇ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ವಿ.ಆರ್. ರಘುನಾಥ್ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಆದರೆ, 14ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ಬೇಲ್ ಅವರು ಗಳಿಸಿದ ಗೋಲು ಆ ತಂಡ, ಭಾರತ ವಿರುದ್ಧ 1-1 ಗೋಲುಗಳ ಸಮಬಲ ಸಾಧಿಸಲು ನೆರವಾಯಿತು.

ಈ ಸಮಬಲದ ಸ್ಥಿತಿಯಿಂದ ಭಾರತ ತಂಡವನ್ನು ಬಲು ಎತ್ತರಕ್ಕೆ ಕೊಂಡೊಯ್ದು ಪಂದ್ಯದಲ್ಲಿ ಹಿಡಿತ ಸಾಧಿಸುವಂತೆ ಮಾಡಿದ್ದು ನಿಕ್ಕಿನ್ ತಿಮ್ಮಯ್ಯ. 23ನೇ, 32ನೇ ಹಾಗೂ 60ನೇ ನಿಮಿಷದಲ್ಲಿ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳು ಭಾರತಕ್ಕೆ ವರವಾಗಿ ಪರಿಣಮಿಸಿದವು. ಭಾರತ ತಂಡ ಗಳಿಸಿದ 4-1ರ ಮುನ್ನಡೆಯನ್ನು ಹಿಂದಿಕ್ಕಲು ಆಸ್ಟ್ರೇಲಿಯನ್ನರು ನಡೆಸಿದ ಹೋರಾಟ ಫಲ ನೀಡಲಿಲ್ಲ. ಕಾಂಗರೂಗಳ ಪಡೆ ತಮ್ಮ ಮೇಲೆ ಹಿಡಿತ ಸಾಧಿಸಲು ಭಾರತೀಯರು ಅವಕಾಶವನ್ನೇ ಕೊಡಲಿಲ್ಲ. ಆದರೂ, ಪಟ್ಟುಬಿಡದೇ ಆಡಿದ ಆಸ್ಟ್ರೇಲಿಯಾ ತಂಡದ ಪರ ಮ್ಯಾಟ್ ಗೋಡೆಸ್ ಅವರು 53ನೇ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಸಫಲರಾದರು. ಅಂತಿಮವಾಗಿ, ಆಸೀಸ್ ತಂಡ ಭಾರತದ ಎದುರು 2-4ರ ಅಂತರದಲ್ಲಿ ಶರಣಾಯಿತು. ಆದರೂ, ಆಸ್ಟ್ರೇಲಿಯಾದ ಫೈನಲ್ ಪ್ರವೇಶಕ್ಕೆ ಈ ಫಲಿತಾಂಶ ಅಡ್ಡಿಯಾಗಲಿಲ್ಲ.

ಒತ್ತಡ ರಹಿತ ಆಟ
ಶನಿವಾರದ ಪಂದ್ಯದಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ಈ ಟೂರ್ನಿಯಲ್ಲಿ ಈವರೆಗೆ ನೀಡಿದ ಶ್ರೇಷ್ಠ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದಾಗಲೇ ಪ್ರಶಸ್ತಿಯಿಂದ ಮುಖವಾಗಿದ್ದ ಭಾರತ ತಂಡದ ಯಾವೊಬ್ಬ ಆಟಗಾರನ ಮೊಗದಲ್ಲಿ ಪಂದ್ಯದ ವೇಳೆ ಯಾವುದೇ ರೀತಿಯ ಒತ್ತಡ ಕಂಡುಬರಲಿಲ್ಲ. ನಿರಾಳವಾಗಿ ಆಡಿದ ತಂಡದ ಎಲ್ಲಾ ಸದಸ್ಯರು ಉತ್ತಮ ಫಲಿತಾಂಶ ದಾಖಲಿಸಿದರು. ಈ ಗೆಲವು ನೂತನ ಮುಖ್ಯ ಕೋಚ್ ಪಾಲ್ ವ್ಯಾನ್ ಆ್ಯಸ್ ಅವರಿಗೂ ಹೆಮ್ಮೆ ತಂದಿರಬಹುದು. ಈ ಗೆಲವಿನೊಂದಿಗೆ, ಅಜ್ಲಾನ್ ಶಾ ಹಾಕಿ ಟೂರ್ನಿಯ ಲೀಗ್ ಹಂತದಲ್ಲಿ ಆಡಿರುವ ಐದು ಪಂದ್ಯಗಳಿಂದ ಭಾರತ ತಂಡ ಒಟ್ಟು ಏಳು ಅಂಕಗಳನ್ನು ಕಲೆಹಾಕಿದೆ. ಮತ್ತೊಂದು ಪಂದ್ಯದಲ್ಲಿ ಕೊರಿಯಾ ಮತ್ತು ನ್ಯೂಜಿಲೆಂಡ್ 3-3 ಗೋಲುಗಳಿಂದ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡವು.

ಭಾನುವಾರದ ಪಂದ್ಯಗಳು
- ಆಸ್ಟ್ರೇಲಿಯಾ- ನ್ಯೂಜಿಲೆಂಡ್ (ಪ್ರಶಸ್ತಿಗೆ ಸೆಣಸು)
- ಭಾರತ- ಕೊರಿಯಾ (ಮೂರನೇ ಸ್ಥಾನಕ್ಕೆ ಪೈಪೋಟಿ)
- ಮಲೇಷ್ಯಾ- ಕೆನಡಾ (ಐದು-ಆರನೇ ಸ್ಥಾನಕ್ಕೆ ಕದನ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com