
ಹೇಸ್ಟಿಂಗ್ಸ್: ಸತತ ಸೋಲಿನಿಂದ ಕೆಂಗೆಟ್ಟಿದ್ದ ಭಾರತೀಯ ವನಿತೆಯರ ತಂಡ, ಹಾಕ್ಸ್ ಕಪ್ ಹಾಕಿ ಟೂರ್ನಿಯಲ್ಲಿ ಕೊನೆಗೂ ಏಳನೇ ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದೆ.
ಪಂದ್ಯಾವಳಿಯಲ್ಲಿನ 7-8ನೇ ಸ್ಥಾನಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳ ಅಂತರದಿಂದ ಭಾರತ ಮಣಿಸಿತು. ಮಹತ್ವದ ಪಂದ್ಯವೊಂದರಲ್ಲಿ ಜಪಾನ್ ತಂಡವನ್ನು ಭಾರತ ಸೋಲಿಸಿದ್ದು ಇದು ಎರಡನೇ ಬಾರಿ. ಕಳೆದ ವರ್ಷ ನಡೆದಿದ್ದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ, ಕಂಚಿನ ಪದಕ್ಕಾಗಿ ನಡೆದಿದ್ದ ಮುಖಾಮುಖಿಯಲ್ಲಿ ಭಾರತ, ಜಪಾನ್ ತಂಡವನ್ನು ಪರಾಭವಗೊಳಿಸಿತ್ತು. ಜಪಾನ್ 8ನೇ ಸ್ಥಾನದೊಂದಿಗೆ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿತು. ಆರಂಭದಿಂದಲೂ ಚುರುಕು ಆಟವನ್ನು ಪ್ರದರ್ಶಿಸಿದ ಜಪಾನ್ ಆಟಗಾರ್ತಿಯರು 4ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು.
ಮಿಯ್ ನಕಾಶಿಮಾ ಅವರು ಗಳಿಸಿದ ಫೀಲ್ಡ್ ಗೋಲ್ ಆ ತಂಡದ ಖಾತೆಯನ್ನು ತೆರೆಯಿತು. ಇದಾದ ಮೇಲೆ, 28ನೇ ನಿಮಿಷದಲ್ಲಿ ಭಾರತ ತಂಡದ ಸುಶೀಲಾ ಪುಕ್ರಂಬಮ್ ಗೋಲು ದಾಖಲಿಸಿದರು. ಈ ಮೂಲಕ ಭಾರತ ಪಂದ್ಯದಲ್ಲಿ ಸಮಬಲ ಸಾಧಿಸಿತು. ಆದರೆ, ಪಂದ್ಯದ ಮೊದಲಾರ್ಧ ಮುಗಿಯುವಷ್ಟರಲ್ಲಿ ಮತ್ತೊಂದು ಗೋಲು ಗಳಿಸಿದ ಜಪಾನ್, ಪುನಃ ಮುನ್ನಡೆ
ಪಡೆದುಕೊಂಡಿತು. ಇದರಿಂದ ಒತ್ತಡಕ್ಕೊಳಗಾದ ಭಾರತೀಯರು, ಮೂರನೇ ಕ್ವಾರ್ಟರ್‍ನಲ್ಲಿ ಗೋಲು ಗಳಿಸಿಲು ಶತಪ್ರಯತ್ನ ನಡೆಸಿದರಾದರೂ ಅದು ಫಲ ನೀಡಲಿಲ್ಲ. ಆದರೆ, ನಾಲ್ಕನೇ ಕ್ವಾರ್ಟರ್‍ನಲ್ಲಿ ಭಾರತದ ಪ್ರಯತ್ನಗಳಿಗೆ ಫಲ ಸಿಕ್ಕಿತು.
ನಾಲ್ಕನೇ ಕ್ವಾರ್ಟರ್ ಆರಂಭವಾದ 6ನೇ ನಿಮಿಷದಲ್ಲಿ ದೀಪಿಕಾ ಗಳಿಸಿದ ಗೋಲು, ಜಪಾನ್ ವಿರುದ್ಧ ಭಾರತ ಪುನಃ ಸಮಬಲ ಸಾಧಿಸಲು ನೆರವಾಯಿತು. ಅಲ್ಲಿಂದ ನಾಲ್ಕು ನಿಮಿಷಗಳ
ತರುವಾಯ ರಿತು ರಾಣಿ ಗಳಿಸಿದ ಮತ್ತೊಂದು ಗೋಲು, ನಿರ್ಣಾಯಕ ಪಾತ್ರ ವಹಿಸಿ, ಭಾರತ ತಂಡಕ್ಕೆ ಗೆಲವು ತಂದಿತು.
Advertisement