
ನವದೆಹಲಿ: ಭಾರೀ ನಿರೀಕ್ಷೆಗಳೊಂದಿಗೆ ಕಳೆದ ವರ್ಷ ಆರಂಭಗೊಂಡಿದ್ದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ವಿವಾದಕ್ಕೆ ಸಿಲುಕಿದೆ.
ಐಬಿಎಲ್‍ನ ಪ್ರವರ್ತಕರಾದ `ಸ್ಪೋರ್ಟ್ಸ್ ಸಲ್ಯೂಷನ್ಸ್ ಸಂಸ್ಥೆ (ಎಸ್ ಎಸ್‍ಪಿಎಲ್)' ಜೊತೆಗಿನ ಒಪ್ಪಂದವನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ರದ್ದುಗೊಳಿಸಿದ್ದು, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಂಸ್ಥೆ ನಿರ್ಧರಿಸಿದೆ.
ಒಪ್ಪಂದ ರದ್ದುಪಡಿಸಿರುವುದು ಕಾನೂನು ಬಾಹಿರ ನಿರ್ಧಾರ ಎಂದಿರುವ ಎಸ್‍ಎಸ್‍ಪಿಎಲ್, ಈ ಕುರಿತಂತೆ ಬಹಿರಂಗವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿರುವ ಅದು, `ಮುಂದಿನ 10 ವರ್ಷಗಳವರೆಗೆ ಭಾರತದಲ್ಲಿ ಅಬಾಧಿತವಾಗಿ ಐಬಿಎಲ್ ಪಂದ್ಯಾವಳಿ ನಡೆಸುವ ಬಗ್ಗೆ ಬಿಎಐ ಹಾಗೂ ಎಸ್‍ಎಸ್‍ಪಿಎಲ್ ನಡುವೆ ಒಪ್ಪಂದವಾಗಿತ್ತು. ಮಹಾರಾಷ್ಟ್ರ ಬ್ಯಾಡ್ಮಿಂಟನ್ ಸಂಸ್ಥೆಯೂ ಈ ಒಪ್ಪಂದಕ್ಕೆ ಸಹಿ ಹಾಕಿದೆ.
ಇದೀಗ, ಒಪ್ಪಂದವನ್ನು ರದ್ದುಗೊಳಿಸಿರುವುದು ಐಬಿಎಲ್‍ನ ಕಾನೂನಿಗೆ ವಿರುದ್ಧ. ಸದ್ಯಕ್ಕೆ ಪ್ರಕರಣವನ್ನು ಕಾನೂನು ತಜ್ಞರ ಅವಗಾಹನೆಗೆ ತರಲಾಗಿದ್ದು, ಶೀಘ್ರವೇ ಬಿಎಐ ಹಾಗೂ ಮಹಾರಾಷ್ಟ್ರ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ದಾವೆ ಹೂಡುತ್ತೇವೆ' ಎಂದು ಕಂಪನಿ ಹೇಳಿದೆ. ಸಂಧಾನಕ್ಕೂ ವೇದಿಕೆ: ನ್ಯಾಯಾಲಯದ ಕದ ತಟ್ಟುವ ಮುನ್ನ, ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲೂ ಸಂಸ್ಥೆ ಯೋಚಿಸಿದೆ. ಐಬಿಎಲ್‍ನ ಎಲ್ಲಾ ಫ್ರಾಂಚೈಸಿಗಳು, ಆಟಗಾರರೊಂದಿಗೆ ಚರ್ಚಿಸಿ, ಮುಂದಿನ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸುತ್ತದೆ ಎಂದು ಸಂಸ್ಥೆ ಹೇಳಿದೆ.
Advertisement