
ಮಾಲೆ (ಮಾಲ್ಡೀವ್ಸ್): ನಾಯಕ ಸುನೀಲ್ ಛೆಟ್ರಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬೆಂಗಳೂರು ಎಫ್ ಸಿ ತಂಡ ಏಷ್ಯನ್ ಪುಟ್ಬಾಲ್ ಕಾನ್ಫೆಡರೇಷನ್ ಕಪ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದೆ.
ನ್ಯಾಷನಲ್ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 2-1 ಗೋಲುಗಳ ಅಂತರದಲ್ಲಿ ಮಾಜಿಯಾ ತಂಡದ ವಿರುದ್ಧ ಗೆಲವು ದಾಖಲಿಸಿತು. ಟೂರ್ನಿಯ ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸಲು ಕೇವಲ 1 ಅಂಕದ ಅಗತ್ಯ ಬಿಎಫ್ ಸಿಗಿತ್ತು. ಹಾಗಾಗಿ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ ಬಿಎಫ್ ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತಿತ್ತು. ಆಡಿರುವ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಗೆಲವು 1ರಲ್ಲಿ ಸೋಲನುಭವಿಸಿರುವ ಬಿಎಫ್ ಸಿ 9 ಅಂಕಗಳನ್ನು ಸಂಪಾದಿಸಿದೆ.
ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಪರಸ್ಪರ ಹೋರಾಟ ನಡೆಸಿದವು. ಹಾಗಾಗಿ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ತೀವ್ರ ಜಿದ್ದಾಜಿದ್ದಿನ ಹೋರಾಟದಿಂದ ಕೂಡಿದ್ದ ಎರಡನೇ ಅವಧಿಯಲ್ಲಿ ಮೂರು ಗೋಲು ದಾಖಲಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿತ್ತು. ಪಂದ್ಯದ 60ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮಾಜಿಯಾ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ಈ ವೇಳೆ ಪಬ್ಲೊ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಈ ವೇಳೆ ತೀವ್ರ ಒತ್ತಡಕ್ಕೆ ಸಿಲುಕಿದ ಬೆಂಗಳೂರು ಎಫ್ ಸಿ, ಚುರುಕಿನ ಆಟಕ್ಕೆ ಮುಂದಾಯಿತು. ಕೆಲ ಹೊತ್ತಿನಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಸುನೀಲ್ ಛೆಟ್ರಿ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. 70ನೇ ನಿಮಿಷದಲ್ಲಿ ಇಮ್ರಾನ್ ನೀಡಿದ ಪಾಸ್ ಅನ್ನು ಪಡೆದ ಸುನೀಲ್, ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಆಮೂಲಕ ತಂಡ ಎದುರಾಳಿ ವಿರುದಟಛಿ ಸಮಬಲ ಸಾಧಿಸಿತು. 78ನೇ ನಿಮಿಷದಲ್ಲಿ ಮತ್ತೆ ಮಿಂಚಿದ ನಾಯಕ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಉದಾಂತ ಅವರು ನೀಡಿದ ಪಾಸ್ ಅನ್ನು ಬಳಿಸಿಕೊಂಡ ಛೆಟ್ರಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿ ತಂಡವನ್ನು ಗೆಲವಿನತ್ತ ಮುನ್ನಡೆಸಿದರು.
Advertisement