"ರಾಯಲ್ಸ್" ಕಾದಾಟ

ತವರಿನ ಅಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಗೆಲವಿನ ಲಯಕ್ಕೆ ಮರಳಿದೆ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಬೆಂಗಳೂರು: ತವರಿನ ಅಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಗೆಲವಿನ ಲಯಕ್ಕೆ ಮರಳಿದೆ. ಈಗ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು, ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದ್ದು ಜಯದ ಹಾದಿಯಲ್ಲಿ ಸಾಗಲು ಎದುರುನೋಡುತ್ತಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ತವರಿನ ಅಂಗಣದಲ್ಲಿ ಮೊದಲ ಗೆಲವು ದಾಖಲಿಸುವ ಗುರಿ ಹೊಂದಿದೆ.

ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಏಪ್ರಿಲ್ 24ರಂದು ಅಹ್ಮದಾಬಾದ್‍ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ 9 ವಿಕೆಟ್‍ಗಳ ಗೆಲವು ದಾಖಲಿಸಿತ್ತು. ಹಾಗಾಗಿ ಈ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಲು ಶೇನ್ ವ್ಯಾಟ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಎದುರು ನೋಡುತ್ತಿದೆ.

ಈವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರಂಭಿಕ ಐದು ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನುಭವಿಸಿತ್ತು. ಇನ್ನು ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‍ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಹಾಗಾಗಿ 11 ಅಂಕವನ್ನು ಪಡೆದುಕೊಂಡಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತಾದರೂ, ನಂತರದ ತವರಿನ ಮೂರು ಪಂದ್ಯಗಳಲ್ಲಿ ಹೀನಾಯವಾಗಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೆಳಸ್ಥಾನಕ್ಕೆ ಕುಸಿದಿತ್ತು. ನಂತರ ಇದೇ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಜಯದ ಹಾದಿಗೆ ಮರಳಿದ ಆರ್‍ಸಿಬಿ, ಕಳೆದ ಪಂದ್ಯದಲ್ಲಿ ಡೇರ್‍ಡೆವಿಲ್ಸ್ ವಿರುದ್ಧ ಭರ್ಜರಿಯ ಗೆಲವು ಸಂಪಾದಿಸಿತ್ತು. ಹಾಗಾಗಿ ಆಡಿರುವ ಆರು ಪಂದ್ಯಗಳ ಪೈಕಿ 3ರಲ್ಲಿ ಜಯ 3ರಲ್ಲಿ ಸೋಲನುಭವಿಸಿ 6 ಅಂಕ ಸಂಪಾದಿಸಿದೆ. ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಹಾದಿ ಸುಗಮವಾಗಬೇಕಾದರೆ, ಸಿಕ್ಕಿರುವ ಜಯದ ಲಯವನ್ನು ಆರ್‍ಸಿಬಿ ಕಳೆದುಕೊಳ್ಳಬಾರದು.

ಸಮತೋಲನ ಕಂಡುಕೊಂಡ ಆರ್‍ಸಿಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಆರಂಭದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಬಿಂಬಿತವಾಗಿತ್ತು. ಆದರೆ, ತವರಿನ ಅಂಗಣದಲ್ಲಿ ಅನುಭವಿಸಿದ ಸೋಲು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಈಗ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ತಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ವಿರಾಟ್ ಕೊಹ್ಲಿ ಪಡೆ, ಸರಿಯಾದ ಸಮತೋಲನ ಕಾಯ್ದುಕೊಂಡಿದೆ. ಕಳೆದೆರಡು ಪಂದ್ಯಗಳಲ್ಲಿ ಅಗ್ರ ಬ್ಯಾಟಿಂಗ್ ಕ್ರಮಾಂಕ ತಂಡವನ್ನು ಗೆಲವಿನ ದಡಕ್ಕೆ ಮುಟ್ಟಿಸಿದೆ. ಇನ್ನು ಬೌಲಿಂಗ್ ವಿಭಾಗ ಸಹ ಮಿಚೆಲ್ ಸ್ಟಾರ್ಕ್ ಆಗಮನದ ನಂತರ ಸಂಪೂರ್ಣ ಬದಲಾಗಿದೆ. ಇದುವರೆಗೂ ಕೊಹ್ಲಿ ಟಾಸ್ ಗೆದ್ದಾಗಲೆಲ್ಲ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಪಂದ್ಯದಲ್ಲೂ ಅದೇ ನಿರ್ಧಾರ ತೆಗೆದುಕೊಳ್ಳುವರೆ ಎಂಬುದನ್ನು ಕಾದುನೋಡಬೇಕು. ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿರುವುದು

ಉತ್ತಮಫಲ ನೀಡಿದೆ. ಇನ್ನು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‍ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿರುವುದು ಉತ್ತಮ ಬೆಳವಣಿಗೆಯಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಮಂದೀಪ್ ಸಿಂಗ್ ಹಾಗೂ ಯುವ ಪ್ರತಿಭೆ ಸರ್ಫ್ರಾಜ್ ಖಾನ್‍ರಿಂದ ಇನ್ನಷ್ಟೇ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಹೊರಬರಬೇಕಿದೆ. ಇನಿಂಗ್ಸ್‍ನ ಅಂತ್ಯದಲ್ಲಿ ರನ್ ರೇಟ್ ಹೆಚ್ಚಿಸಲು ಆಲ್ರೌಂಡರ್ ಡೇವಿಸ್ ವೈಸ್ ಕಾಣಿಕೆ ಅಗತ್ಯವಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಉಮೇಶ್ ಯಾದವ್ ಜೋಡಿ ದಾಳಿ ಆರಂಬಿsಸುವುದು ಕಳೆದ ಪಂದ್ಯದಲ್ಲಿ ಯಶಸ್ವಿಯಾಗಿದೆ. ಇವರೊಂದಿಗೆ ಹರ್ಷಲ್ ಪಟೇಲ್, ಇಕ್ಬಾಲ್ ಅಬ್ದುಲ್ಲಾ ಬೆಂಬಲ ನೀಡುತ್ತಿದ್ದಾರೆ. ಬ್ಯಾಟಿಂಗ್ ಸ್ವರ್ಗವಾಗಿರುವ ಚಿನ್ನಸ್ವಾಮಿ ಅಂಗಣದಲ್ಲಿ ಆರ್ ಸಿಬಿ ಬೌಲಿಂಗ್ ವಿಭಾಗ ಕಳೆದೆರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನವನ್ನೇ ನೀಡುವುದೇ ಎಂಬುದನ್ನು ಕಾದುನೋಡಬೇಕು.

ಗೆಲವಿನ ಅಗತ್ಯದಲ್ಲಿ ರಾಜಸ್ಥಾನ:
ಆರಂಭಿಕ ಐದು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಮೂರು ಪಂದ್ಯಗಳಿಂದ ಕೇವಲ 1 ಅಂಕವನ್ನು ಸಂಪಾದಿಸಿದೆ. ಈಗ ಹಳಿತಪ್ಪಿರುವ ರಾಯಲ್ಸ್ ಪಡೆಗೆ ಸತತ ಎರಡು ಸೋಲು ಎದುರಾಗಿದ್ದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಓವರ್‍ನಲ್ಲಿ ವಿರೋಚಿತ ಸೋಲನುಭವಿಸಿದರೂ ಆರ್‍ಸಿಬಿ ವಿರುದ್ಧದ ಹೀನಾಯ ಸೋಲು ತಂಡಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ತಂಡ ಆರ್‍ಸಿಬಿ ವಿರುದ್ಧವೇ ಗೆದ್ದು ಜಯದ ಹಾದಿಗೆ ಮರಳಲು ಸಜ್ಜಾಗಿದೆ.

ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿರುವ ಅಜಿಂಕ್ಯ ರಹಾನೆ ಜತೆಗೆ ಶೇನ್ ವ್ಯಾಟ್ಸನ್ ಇನಿಂಗ್ಸ್ ಆರಂಭಿಸುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್, ಈ ಜೋಡಿ ಆರ್‍ಸಿಬಿ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದ ಎರಡು ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕದ ಜತೆಯಾಟ ನೀಡಿತ್ತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್, ಕರುಣ್ ನಾಯರ್, ದೀಪಕ್ ಹೂಡಾ, ಆಲ್ರೌಂಡರ್ ಜೇರ್ಮ್ಸ ಫಲ್ಕನರ್ ಈ ಪಂದ್ಯದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಅಂಗಣದಲ್ಲಿ ಈ ಆಟಗಾರರು ಸ್ಫೋಟಿಸಿದರೆ, ರನ್ ಹೊಳೆ ಹರಿಯುವುದರಲ್ಲಿ ಅನುಮಾನವಿಲ್ಲ.

ಇನ್ನು ಬೌಲಿಂಗ್ ವಿಭಾಗದಲ್ಲಿ ಫಲ್ಕನರ್ ಜತೆಗೆ ಕ್ರಿಸ್ ಮೋರಿಸ್, ಧವಳ್ ಕುಲಕರ್ಣಿ, ಪ್ರವೀಣ್ ತಾಂಬೆ, ಶೇನ್ ವ್ಯಾಟ್ಸನ್ ಆರ್ ಸಿಬಿ ತಂಡದ ಬ್ಯಾಟ್ಸ್‍ಮನ್‍ಗಳಿಗೆ ಮೂಗುದಾರ ಹಾಕುವರೇ ಎಂಬುದನ್ನು ಕಾದುನೋಡಬೇಕು. ಅಭಿಮಾನಿಗಳಿಗೆ ದ್ರಾವಿಡ್ ಆಕರ್ಷಣೆ: ಈ ಪಂದ್ಯದಲ್ಲಿ ಬೆಂಗಳೂರಿನ ಅಭಿಮಾನಿಗಳು ಎರಡೂ ತಂಡಗಳಿಗೆ ಬೆಂಬಲ ನೀಡುವಂತಹ ಪರಿಸ್ಥಿತಿ ಎದುರಾಗಿದೆ. ಆರ್‍ಸಿಬಿ ತಂಡ ತವರಿನ ತಂಡ ಎಂದು ಬೆಂಬಲಿಸುವವರು ಒಂದೆಡೆಯಾದರೆ, ದೇಶದ ಕ್ರಿಕೆಟ್ ಐಕಾನ್‍ಗಳಲ್ಲಿ ಒಬ್ಬರಾದ ಕರ್ನಾಟಕದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ರಾಜಸ್ಥಾನ ರಾಯಲ್ಸ್‍ಗೂ ಬೆಂಬಲ ಸಿಗುವುದರಲ್ಲಿ ಅನುಮಾನವಿಲ್ಲ.

ರಾಹುಲ್ ದ್ರಾವಿಡ್ ಅವರಿಂದಾಗಿ ರಾಜಸ್ಥಾನ ತಂಡ ದೇಶದ ಯಾವುದೇ ಭಾಗದಲ್ಲಿ ಪಂದ್ಯವಾಡಿದರೂ ಅಭಿಮಾನಿಗಳ ಬೆಂಬಲ ಪಡೆಯುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ ದ್ರಾವಿಡ್ ಪಡೆಗೆ ಹೆಚ್ಚು ಬೆಂಬಲ ಸಿಕ್ಕರೆ ಅಚ್ಚರಿಪಡುವಂತಿಲ್ಲ. ಅಲ್ಲದೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕನ್ನಡಿಗರಾದ ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿ ಆಡುತ್ತಿರುವುದು ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಅಭಿಮಾನಿಗಳಿಗೆ ಸಂತೋಷ ಖಂಡಿತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com