ಸ್ವಹಿತಾಸಕ್ತಿ ಸಂಘರ್ಷದಲ್ಲಿ ಸಚಿನ್, ಕುಂಬ್ಳೆ, ಗಂಗೂಲಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಅಂಟಿಕೊಂಡಿರುವ 'ಸ್ವಹಿತಾಸಕ್ತಿ'ಯ ಕಳಂಕವನ್ನು ತೊಡೆದು ಹಾಕಲು ಆಟಗಾರರ ಏಜೆಂಟ್‌ಗಳಿಗೂ ಬಿಸಿಸಿಐ...
ಸಚಿನ್ ತೆಂಡೂಲ್ಕರ್ - ಸೌರವ್ ಗಂಗೂಲಿ
ಸಚಿನ್ ತೆಂಡೂಲ್ಕರ್ - ಸೌರವ್ ಗಂಗೂಲಿ
Updated on

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಅಂಟಿಕೊಂಡಿರುವ 'ಸ್ವಹಿತಾಸಕ್ತಿ'ಯ ಕಳಂಕವನ್ನು ತೊಡೆದು ಹಾಕಲು ಆಟಗಾರರ ಏಜೆಂಟ್‌ಗಳಿಗೂ ಬಿಸಿಸಿಐ ಮಾನ್ಯತೆ ಕಡ್ಡಾಯಗೊಳಿಸಿದೆ. ಆದರೆ, ಇದು ಬಿಸಿಸಿಐನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಾಜಿ ಕ್ರಿಕೆಟರುಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆಯಂಥವರನ್ನು ಬಾಧಿಸಲಿದೆ ಎಂದು ವರದಿ ಮಾಡಲಾಗಿದೆ.

ನೂತನವಾಗಿ ಅಸ್ತಿತ್ವಕ್ಕೆ ತರಲು ಉದ್ದೇಶಿಸಲಾಗಿರುವ 'ನೀತಿ ಸಂಹಿತೆ' ಹಾಗೂ ಆಟಗಾರರ ಏಜೆಂಟ್‌ಗಳಿಗೂ ಮಾನ್ಯತೆ ವ್ಯವಸ್ಥೆಯ ಬಗ್ಗೆ ಮುಂಬರುವ ಬಿಸಿಸಿಐನ ಕಾರ್ಯಕಾರಣಿಯಲ್ಲಿ ಚರ್ಚಿಸಲಾಗುತ್ತದೆ. ಇದಕ್ಕೂ ಮುನ್ನವ ಒಂದು ಹೆಜ್ಜೆ ಮುಂದಿಟ್ಟಿರುವ ಬಿಸಿಸಿಐ, ತನ್ನ ಅಧೀನದಲ್ಲಿರುವ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೂ ಪತ್ರ ಬರೆದು ತಮ್ಮಲ್ಲಿನ ಪದಾಧಿಕಾರಿಗಳು, ಅಧಿಕಾರಿಗಳು ಯಾವುದೇ ರೀತಿಯ ಸ್ವಹಿತಾಸಕ್ತಿಯ ಸಂಘರ್ಷವನ್ನು ಹೊಂದಿಲ್ಲ ಎಂಬ ಮುಚ್ಚಳಿಕೆಗೆ ಸಹಿ ಹಾಕಿಸಿಕೊಂಡಿದೆ.

ಹಾಗೊಂದು ವೇಳೆ ನೂತನ ನೀತಿ ಸಂಹಿತೆ ಜಾರಿಗೊಂಡಿದ್ದೇ ಆದಲ್ಲಿ, ಬಿಸಿಸಿಐನಲ್ಲಿದ್ದುಕೊಂಡು ನೇರವಾಗಿ ಅಥವಾ ಪರೋಕ್ಷವಾಗಿ ಲಾಭ ಗಳಿಕೆಯಲ್ಲಿ ನಿರತವಾಗಿರುವ ತಮ್ಮ ಪ್ರಭಾವದಿಂದ ಇಡೀ ವ್ಯವಸ್ಥೆಯನ್ನು ತಮ್ಮ ಆಣತಿಯಂತೆ ಮುನ್ನಡೆಸಿಕೊಂಡು ಹೋಗುತ್ತಿರುವ ವ್ಯಕ್ತಿಗಳಿಗೆ ಇದರಿಂದ ಧಕ್ಕೆಯಾಗಲಿದೆ. ಉದಾಹರಣೆಗೆ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಸ್ತುತ ಬಿಸಿಸಿಐನ ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಐಪಿಎಲ್ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ಪ್ರಧಾನ ಸಲಹೆಗಾರರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಇನ್ನು, ಟೆನ್ವಿಕ್ ಎಂಬ ಕ್ರೀಡಾ ತರಬೇತಿ ಸಂಸ್ಥೆಯನ್ನೂ ಅವರು ನಡೆಸುತ್ತಿದ್ದಾರೆ. ಹಾಗಾಗಿ, ಅನಿಲ್ ಕುಂಬ್ಳೆ ಅವರು ಬಿಸಿಸಿಐನ ನೂತನ ನೀತಿ ಸಂಹಿತೆಯನುಸಾರ ಸ್ವಹಿತಾಸಕ್ತಿ ಸಂಘರ್ಷದ ವ್ಯಾಪ್ತಿಯಲ್ಲಿ ಬರುತ್ತಾರೆ.

ಇನ್ನು ತಮ್ಮ ಪ್ರಭಾವ ಬೆಳೆಸಿ ಸ್ವಹಿತಾಸಕ್ತಿ ಕಾಪಾಡಿಕೊಳ್ಳುವವರ ಸಾಲಿಗೆ ರೋಜರ್ ಬಿನ್ನಿಯವರ ಹೆಸರೂ ಸೇರ್ಪಡೆಗೊಂಡಿದೆ. ಬಿಸಿಸಿಐನ ಆಕ್ಯೆ ಮಂಡಳಿ ಸದಸ್ಯರಾಗಿದ್ದಾಗ ಅವರ ಮಗ ಸ್ಟುವರ್ಟ್ ಬಿನ್ನಿಗೆ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವಂತೆ ನೋಡಿಕೊಂಡರು ಎಂಬ ಆರೋಪವೂ ಅವರ ಮೇಲಿದೆ.

ಈ ರೀತಿಯ ಎಲ್ಲಾ ವಿಚಾರಗಳನ್ನೂ ಸೂಕ್ಷವಾಗಿ ಗಮನಿಸಿರುವ ಬಿಸಿಸಿಐ, ಇದಕ್ಕೆ ತಡೆ ಹಾಕಲು ಮುಂದಾಗಿದೆ. ಇದಲ್ಲದೆ, ಇನ್ನೂ ಹತ್ತು ಹಲವರು ಇಂಥ ಸ್ವಹಿತಾಸಕ್ತಿಯ ಸಂಘರ್ಷದ ಬಲೆಯಲ್ಲಿದ್ದು ಬಿಸಿಸಿಐಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿರುವುದು ಸುಳ್ಳಲ್ಲ. ಅಂಥವರಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಬ್ರಿಜೆಶ್ ಪಟೇಲ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಪ್ರಮುಖರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com