

ನವದೆಹಲಿ: ಆರನೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ತ್ರಿಸದಸ್ಯ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ಪಟ್ಟಿಯಲ್ಲಿನ ಹದಿಮೂರು ವ್ಯಕ್ತಿಗಳ ವರದಿಯನ್ನು ನ್ಯಾ.ಲೋಧ ಸಮಿತಿಗೆ ನೀಡಬೇಕೆಂಬ ಬಿಹಾರ ಕ್ರಿಕೆಟ್ ಸಂಸ್ಥೆಯ ಮನವಿ ಯನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರ ತುರ್ತಾಗಿ ನಡೆಸಿದ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ತ್ರಿಸದಸ್ಯ ಪೀಠ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತಲ್ಲದೆ, ಇದೇ ಡಿಸೆಂಬರ್ 31ರವರೆಗೂ ಬಿಸಿಸಿಐ ಅನ್ನು ಹೊಸ ನಿಯಮಾವಳಿಗಳೊಂದಿಗೆ ಪುನರ್ ರೂಪಿಸುವ ಸಂಬಂಧ ನೇಮಕವಾಗಿರುವ ನಿವೃತ್ತ ನ್ಯಾ. ಲೋಧಾ ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸಿತು.
ಅಂದಹಾಗೆ 2013ರ ಐಪಿಎಲ್ ಸ್ಪಾಟ್ಫಿಕ್ಸಿಂಗ್ ಹಗರಣದ ತನಿಖೆಗಾಗಿ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿತ್ತು.