
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಎಸ್‍ಸಿಎ ಇಲೆವೆನ್ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆ ತಂಡಗಳ ನಡುವಿನ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಸೆಮಿಫೈನಲ್ ಪಂದ್ಯ ತೀವ್ರ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ.
ತನ್ನ ಮೊದಲ ಇನಿಂಗ್ಸ್‍ನಲ್ಲಿ ವಿದರ್ಭ ಗಳಿಸಿದ್ದ 352 ರನ್‍ಗೆ ಉತ್ತರವಾಗಿ ಪಂದ್ಯದ ಎರಡನೇ ದಿನವಾದ ಭಾನುವಾರದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿದ್ದ ಕೆಎಸ್‍ಸಿಎ ಇಲೆವೆನ್, ಸೋಮವಾರ ತನ್ನ ಇನಿಂಗ್ಸ್ ಮುಂದುವರೆಸಿ 418 ರನ್‍ಗಳಿಗೆ ಆಲೌಟ್ ಆಯಿತು. ಭಾನುವಾರ 93 ರನ್ ಗಳಿಸಿ ಅಜೇಯರಾಗುಳಿದಿದ್ದ ಪವನ್ ದೇಶಪಾಂಡೆ ಶತಕ ಪೂರೈಸಿದ್ದು ದಿನದ ವಿಶೇಷವಾಗಿತ್ತು.
ಕೆಎಸ್ ಸಿಎ ತಂಡದ ಮೊದಲ ಇನ್ನಿಂಗ್ಸ್ ನಂತರ ತನ್ನ ದ್ವಿತೀಯ ಇನಿಂಗ್ಸ್ ಮುಂದುವರೆಸಿದ ವಿದರ್ಭ, ದಿನಾಂತ್ಯದ ಹೊತ್ತಿಗೆ 102 ರನ್ ಪೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಮಿಂಚಿನ ದಾಳಿ ನಡೆಸಿದ ಕೆಎಸ್‍ಸಿಎ ತಂಡದ ಅಭಿಮನ್ಯು ಮಿಥುನ್ ವಿದರ್ಭದ ಮೂರು ವಿಕೆಟ್ ಕೆಡವಿ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು.
ಸಂಕ್ಷಿಪ್ತ ಸ್ಕೋರ್: ವಿದರ್ಭ 353 ಮತ್ತು 102ಕ್ಕೆ 6 (ಶಲಭ್ ಶ್ರೀವಾಸ್ತವ 48; ಅಭಿಮನ್ಯು ಮಿಥುನ್ 29ಕ್ಕೆ 3) ಕೆಎಸ್‍ಸಿಎ ಮೊದಲ ಇನಿಂಗ್ಸ್ 418 (ಅಭಿಶೇಕ್ ರೆಡ್ಡಿ 167, ಪವನ್ ದೇಶಪಾಂಡೆ 104; ಎಸ್. ಅರವಿಂದ್ 46; ಸ್ವಪ್ನಿಲ್ ಬಂಡೀವರ್ 51ಕ್ಕೆ 3).
ಹರ್ಯಾಣಕ್ಕೆ ಸೋಲು: ಇನ್ನು ಆಲೂರಿನಲ್ಲಿ ನಡೆಯುತ್ತಿದ್ದ ಟೂರ್ನಿಯ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಡಿ.ವೈ. ಪಾಟೀಲ್ ತಂಡ, ಹರ್ಯಾಣ ಕ್ರಿಕೆಟ್ ಸಂಸ್ಥೆ ತಂಡದ ವಿರುದ್ಧ 6 ವಿಕೆಟ್ ಜಯ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ಹರ್ಯಾಣ 221 ಮತ್ತು 138; ಡಿ.ವೈ. ಪಾಟೀಲ್: 199 ಮತ್ತು 165ಕ್ಕೆ 4 (ಶೋಯೆಬ್ ಶೇಕ್ 41, ಗೌರವ್ ಜಾಥರ್ 40; ಜಯಂತ್ ಯಾದವ್ 64ಕ್ಕೆ 2).
Advertisement