

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕರಾಗಿರುವ ಪ್ರೀತಿ ಝಿಂಟಾ, ತಮ್ಮ ತಂಡದ ಕೆಲವು ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾರುವ ಶಂಕೆ ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಬಾಲಿವುಡ್ ನಟಿ ಬುಧವಾರ ತಳ್ಳಿಹಾಕಿದ್ದಾರೆ.
ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು, ತಮ್ಮ ಆಟಗಾರರು ಕೆಲವೊಂದು ಪಂದ್ಯಗಳನ್ನು ಸೋಲುವ ಮೂಲಕ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಬಿಸಿಸಿಐ ಅಧಿಕಾರಿಗಳಲ್ಲಿ ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಮಾಧ್ಯಮಗಳ ಈ ವರದಿ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಝಿಂಟಾ, ಬಿಸಿಸಿಐ ಅಧಿಕಾರಿಗಳೊಂದಿಗಿನ ತಮ್ಮ ಮಾತುಕತೆಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದು, ಇದನ್ನು ತಾವು ಖಂಡಿಸುವುದಾಗಿ ಹೇಳಿದ್ದಾರೆ.
'ಈ ವರದಿಯಿಂದ ಆಘಾತವಾಗಿದೆ ಮತ್ತು ಇದು ಸಂಪೂರ್ಣ ಬೇಜವಾಬ್ದಾರಿತನದ್ದು, ಈ ವರದಿ ಸಂಪೂರ್ಣ ಸುಳ್ಳು. ಪರೀಶಿಲಿಸದೇ ತಪ್ಪು ಮಾಹಿತಿ ಕೊಡುವುದನ್ನು ನಿಲ್ಲಿಸಿ' ಎಂದು ಝಿಂಟಾ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 8ರಂದು ನಡೆದಿದ್ದ ಐಪಿಎಲ್ ಕಾರ್ಯಕಾರಿ ಸಮೂಹ ಸಭೆಯಲ್ಲಿ ಪ್ರೀತಿ ಝಿಂಟಾ ಅವರು ಕ್ರಿಕೆಟ್ ನಿಯಂತ್ರಣ ಮಂಡಳಿಯ ಸದಸ್ಯರಿಗೆ, ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆಲವು ಸದಸ್ಯರು ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ ಮತ್ತು ಬಿಸಿಸಿಐ ನ ಭ್ರಷ್ಟಾಚಾರ ನಿಯಂತ್ರಣ ತಂಡ, ಸ್ಪಾಟ್ ಫಿಕ್ಸಿಂಗ್ ಹಗರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ವಿಫಲವಾದೆ ಎಂದು ದೂರಿರುವುದಾಗಿ ವರದಿ ಮಾಡಲಾಗಿತ್ತು.