ಅಕ್ಷರ್ ಪಟೇಲ್ ಸ್ಪಿನ್ ದಾಳಿ

ಆಲ್‍ರೌಂಡರ್ ಅಕ್ಷರ್ ಪಟೇಲ್ (92/5) ನಡೆಸಿದ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಭಾರತ `ಎ' ತಂಡ, ಪ್ರವಾಸಿ ದ.ಆಫ್ರಿಕಾ `ಎ' ತಂಡವನ್ನು 260 ರನ್‍ಗಳಿಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿದೆ...
ವಿಕೆಟ್ ಪಡೆದ ಖುಷಿಯಲ್ಲಿ ಸಂತಸ ವ್ಯಕ್ತಪಡಿಸುತ್ತಿರುವ ಅಕ್ಷರ್ ಪಟೇಲ್
ವಿಕೆಟ್ ಪಡೆದ ಖುಷಿಯಲ್ಲಿ ಸಂತಸ ವ್ಯಕ್ತಪಡಿಸುತ್ತಿರುವ ಅಕ್ಷರ್ ಪಟೇಲ್

ವಯನಾಡು: ಆಲ್‍ರೌಂಡರ್ ಅಕ್ಷರ್ ಪಟೇಲ್ (92/5) ನಡೆಸಿದ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಭಾರತ `ಎ' ತಂಡ, ಪ್ರವಾಸಿ ದ.ಆಫ್ರಿಕಾ `ಎ' ತಂಡವನ್ನು 260 ರನ್‍ಗಳಿಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿದೆ.

ಇಲ್ಲಿನ ಕೃಷ್ಣಗಿರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದ ಮೊದಲ ದಿನದಂದು ಪ್ರಾಬಲ್ಯ ಮೆರೆದ ಆತಿಥೇಯ ಭಾರತ ತಂಡದ ವಿರುದ್ಧ ಆರಂಭಿಕ ಸ್ಟಿಯಾನ್ ವಾನ್ ಜಿಲ್ (96) ಏಕಾಂಗಿ ಹೋರಾಟ ನಡೆಸಿ ಕೇವಲ 4 ರನ್‍ಗಳಿಂದ ಶತಕ ವಂಚಿತರಾದರು. ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದ. ಆಫ್ರಿಕಾ ತಂಡ ಉತ್ತಮ ಆರಂಭವನ್ನೇ ಕಂಡಿತಾದರೂ, ಮಧ್ಯಮ ಹಾಗೂ ಕೆಳ ಕ್ರಮಾಂಕಿತ ಆಟಗಾರರ ವೈಫಲ್ಯ ದಿಂದಾಗಿ ಸ್ಪರ್ಧಾತ್ಮಕ ಮೊತ್ತದಿಂದ ವಂಚಿತವಾಯಿತು.

ಆರಂಭಿಕ ರೀಜಾ ಹೆನ್ರಿಕ್ಸ್ (22) ಮತ್ತು ಸ್ಟಿಯಾನ್ ವಾನ್ ಜಿಲ್ ಜೋಡಿ ಮೊದಲ ವಿಕೆಟ್‍ಗೆ 58 ರನ್ ಕಲೆಹಾಕಿತು. ಆದರೆ ರೀಜಾ, ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬಾಬಾ ಅಪರಾಜಿತ್‍ಗೆ ಕ್ಯಾಚಿತ್ತು ಕ್ರೀಸ್ ತೊರೆದ ನಂತರ ಬಂದ ಗಿಹಾನ್ ಕ್ಲೊಯ್ಟಿ ಕೂಡ ಸ್ಥಿರ ಪ್ರದರ್ಶನ ನೀಡದೆ ತ್ವರಿತಗತಿಯಲ್ಲಿ ಕ್ರೀಸ್ ತೊರೆದರು. ಅವರು 26 ರನ್‍ಗಳಿಗೆ ನಿರುತ್ತರರಾದರು. ತದನಂತರ ಕ್ರೀಸ್‍ಗಿಳಿದ ಒಂಫೀಲಿ ರಮೇಲಾ 30 ರನ್ ಮಾಡಿ ಕರಣ್ ಶರ್ಮಾ ಬೌಲಿಂಗ್‍ನಲ್ಲಿ ಬಾಬಾ ಅಪರಾಜಿತ್‍ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಸ್ಟಿಯಾನ್ ಒಂದಷ್ಟು ಪ್ರತಿರೋಧ ತೋರಿ ಯಶಸ್ವಿ ಅರ್ಧಶತಕ ಪೂರೈಸಿದರಾದರೂ, ಅವರು ಶತಕ ಪೂರೈಸದಂತೆ ಯಾದವ್ ನೋಡಿಕೊಂಡರು. ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ ಮಾಂತ್ರಿಕ ಅಕ್ಷರ್ ಪಟೇಲ್, ದ.ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಅವರಿಗೆ ಜೆ.ಜೆ. ಯಾದವ್ (53ಕ್ಕೆ 3), ಕರಣ್ ಶರ್ಮಾ 36ಕ್ಕೆ 2 ವಿಕೆಟ್ ಗಳಿಸಿ ಭರ್ಜರಿ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್: ದ.ಆಫ್ರಿಕಾ ಎ ಮೊದಲ ಇನ್ನಿಂಗ್ಸ್ 89.5 ಓವರ್‍ಗಳಲ್ಲಿ 260 (ಸ್ಟಿಯಾನ್ ವಾನ್ ಜಿಲ್ 96, ಒಂಫೀಲಿ ರಮೇಲಾ 30, ಗಿಹಾನ್ ಕ್ಲೊಯ್ಟೀ 26, ಡೇನ್ ವಿಲಾಸ್ 24; ಅಕ್ಷರ್ ಪಟೇಲ್ 92ಕ್ಕೆ 5, ಜೆ.ಜೆ. ಯಾದವ್ 53ಕ್ಕೆ 3, ಕರಣ್ ಶರ್ಮಾ 36ಕ್ಕೆ 2).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com