
ಕೊಲಂಬೋ: ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ ಹಿನ್ನಲೆಯಲ್ಲಿ ಭಾರತದ ಇಶಾಂತ್ ಶರ್ಮಾ ಸೇರಿದಂತೆ ಶ್ರೀಲಂಕಾದ ಮೂವರು ಕ್ರಿಕೆಟಿಗರಿಗೆ ಐಸಿಸಿ ದಂಡ ಹಾಕಿದೆ ಎಂದು ತಿಳಿದುಬಂದಿದೆ.
ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ಭಾರತದ ಇಶಾಂತ್ ಶರ್ಮಾ ಹಾಗೂ ಲಂಕಾದ ಬೌಲರ್ ಧಮ್ಮಿಕಾ ಪ್ರಸಾದ್ ನಡುವೆ ವಾಗ್ವಾದ ನಡೆದಿತ್ತು. ಕ್ರೀಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಶಾಂತ್ ಶರ್ಮಾ ಅವರಿಗೆ ಬೌಲರ್ ಧಮ್ಮಿಕಾ ಪ್ರಸಾದ್ ಸತತ 2 ಬೌನ್ಸರ್ ಗಳನ್ನು ಎಸೆಯುವ ಮೂಲಕ ಕೆಣಕಿದರು. ಈ ವೇಳೆ ಕುಪಿತಗೊಂಡ ಇಶಾಂತ್, ಪ್ರಸಾದ್ ರೊಂದಿಗೆ ಮಾತಿನ ಚಕಮಕಿ ನಡೆಸಿದರು. ಪ್ರಸಾದ್ ರೊಂದಿಗೆ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದ ಕೆಲ ಆಟಗಾರರು ಇಶಾಂತ್ ಶರ್ಮಾರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಅಂಪೈರ್ ಗಳು ಉಭಯ ತಂಡದ ಆಟಗಾರರನ್ನು ಸಮಾಧಾನಗೊಳಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಪಂದ್ಯದ ರೆಫರಿ ನೀಡಿರುವ ಮಾಹಿತಿಯ ಮೇರೆಗೆ ಭಾರತದ ಇಶಾಂತ್ ಶರ್ಮಾ ಹಾಗೂ ಲಂಕಾದ ಧಮ್ಮಿಕಾ ಪ್ರಸಾದ್, ದಿನೇಶ್ ಚಾಂಡಿಮಾಲ್, ಲಾಹಿರು ತಿರುಮಾನ್ನೆ ಅವರ ವಿರುದ್ಧ ದಂಡ ವಿಧಿಸಿದೆ. ಆದರೆ ಈ ವರೆಗೂ ದಂಡ ವಿವರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದಿರುವ ಐಸಿಸಿ, ಘಟನೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪಂದ್ಯ ಮುಗಿದ ಬಳಿಕ ದಂಡ ಅಥವಾ ಶಿಕ್ಷೆಯ ವಿವರ ನೀಡುವುದಾಗಿ ಹೇಳಿದೆ.
ಕ್ರಿಕೆಟ್ ತಜ್ಞರ ಪ್ರಕಾರ, ಕ್ರೀಡಾಂಗಣದಲ್ಲಿ ಆಟಗಾರರು ವಾಗ್ವಾದ ನಡೆಸುವುದು ಐಸಿಸಿ ನಿಯಮಗಳ ಸ್ಪಷ್ಟಉಲ್ಲಂಘನೆಯಾಗಿದ್ದು, ಪಂದ್ಯದ ಶೇ.65 ರಷ್ಟು ಸಂಭಾವನೆ ದಂಡ ಅಥವಾ ಒಂದು ಪಂದ್ಯದ ನಿಷೇಧ ಶಿಕ್ಷೆ ಎದುರಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement