ಕರ್ನಾಟಕ ತಂಡದ ರಣಜಿ ಚ್ಯಾಂಪಿಯನ್ ಪಟ್ಟದ ಕನಸು ನುಚ್ಚು ನೂರು

ನಿರ್ಣಾಯಕ 8ನೇ ಹಾಗೂ ಅಂತಿಮ ಲೀಗ್ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಅಗ್ರ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 53 ರನ್ ಸೋಲನುಭವಿಸಿದೆ...
ಕರ್ನಾಟಕ ರಣಜಿ ತಂಡ
ಕರ್ನಾಟಕ ರಣಜಿ ತಂಡ

ಪುಣೆ: ಮಹಾರಾಷ್ಟ್ರ ತಂಡದೆದುರಿನ ಮಾಡು ಇಲ್ಲವೆ ಮಡಿ ಸವಾಲಿನ ನಿರ್ಣಾಯಕ 8ನೇ ಹಾಗೂ ಅಂತಿಮ ಲೀಗ್ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಅಗ್ರ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 53 ರನ್ ಸೋಲನುಭವಿಸಿದೆ. ಈ ಮೂಲಕ ಸತತ ಮೂರನೇ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಕಳೆದುಕೊಂಡಿದೆ.

ಕಳೆದ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ (34 ರಣಜಿ ಪಂದ್ಯ, 2 ಇರಾನಿ ಟ್ರೋಫಿ ಪಂದ್ಯ, 1 ಬಾಂಗ್ಲಾದೇಶ ಎ ವಿರುದ್ಧ ಪಂದ್ಯ) ಸೋಲಿಲ್ಲದೆ ಮುನ್ನುಗ್ಗಿದ್ದ ರಾಜ್ಯ ತಂಡದ ಓಟಕ್ಕೆ ಈ ಸೋಲಿನೊಂದಿಗೆ ಕಡಿವಾಣ ಬಿದ್ದಿದೆ. ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ಜಯ, 1 ಸೋಲು ಮತ್ತು 5 ಡ್ರಾದೊಂದಿಗೆ ವಿನಯ್ಕುಮಾರ್ ಪಡೆ 24 ಅಂಕದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟು ಕ್ವಾರ್ಟರ್​ಫೈನಲ್​ನಿಂದ ವಂಚಿತವಾಗಿದೆ.

ಮಹಾರಾಷ್ಟ್ರ ಎಸೆದ 293 ರನ್ ಗೆಲುವಿನ ಸವಾಲಿಗೆ ಪ್ರತಿಯಾಗಿ 1 ವಿಕೆಟ್​ಗೆ 61ರನ್​ಗಳಿಂದ ಶುಕ್ರವಾರ ಅಂತಿಮ ದಿನದಾಟ ಮುಂದುವರಿಸಿದ ಕರ್ನಾಟಕ, ರಾಬಿನ್ ಉತ್ತಪ್ಪ(61ರನ್, 108ಎಸೆತ, 6ಬೌಂಡರಿ, 2ಸಿಕ್ಸರ್) ಹಾಗೂ ಉಪನಾಯಕ ಸಿಎಂ ಗೌತಮ್ 65ರನ್, 104ಎಸೆತ, 7ಬೌಂಡರಿ) ಅರ್ಧಶತಕದಾಟದ ಹೊರತಾಗಿಯೂ ಮಧ್ಯಮ ವೇಗಿಗಳಾದ ನಿಖಿಲ್ ಧುಮಲ್(78ಕ್ಕೆ 5) ಹಾಗೂ ಅನುಪಮ್ ಸಂಕ್ಲೇಚ(65ಕ್ಕೆ 4) ಸಂಘಟಿತ ದಾಳಿಗೆ ತತ್ತರಿಸಿ 239ರನ್​ಗೆ ದ್ವಿತೀಯ ಇನಿಂಗ್ಸ್ ಮುಗಿಸಿ ಶರಣಾಯಿತು.

ಮಹಾರಾಷ್ಟ್ರ: 212 ಮತ್ತು 260, ಕರ್ನಾಟಕ: 180 ಮತ್ತು 72 ಓವರ್​ಗಳಲ್ಲಿ 239(ಉತ್ತಪ್ಪ 61, ಗೌತಮ್ 65, ಮಯಾಂಕ್ ಅಗರ್ವಾಲ್ 31, ಮನೀಷ್ ಪಾಂಡೆ 0, ಕರುಣ್ ನಾಯರ್ 4, ಧುಮಲ್ 78ಕ್ಕೆ 5, ಸಂಕ್ಲೇಚ 65ಕ್ಕೆ4).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com