
ಪ್ರಿಟೋರಿಯಾ: ಗೆಳತಿ ರೀವಾ ಸ್ಟೀನ್‍ಕಾಂಪ್ ಅವರನ್ನು 2013ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಅವರನ್ನು ಕೊಲೆಗಾರ ಎಂದು ದಕ್ಷಿಣ ಆಫ್ರಿಕಾ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಳೆದ ಅಕ್ಟೋಬರ್‍ನಲ್ಲಿ ಪೆರೋಲ್ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಗೃಹ ಬಂಧನದಲ್ಲಿದ್ದ ಪಿಸ್ಟೋರಿಯಸ್ ಈಗ ಮತ್ತೆ ಜೈಲಿಗೆ ಹೋಗಬೇಕಿದೆ. ಆರೋಪಿ ಅಪರಾಧ ಉದ್ದೇಶ ಹೊಂದಿದ್ದರಿಂದ ಇದನ್ನು ಕೊಲೆ ಎಂದು ನಿರ್ಧರಿಸಲಾಗಿದೆ ಎಂದು ನ್ಯಾಯಮೂರ್ತಿ ಎರಿಕ್ ಲೀಚ್ ತಿಳಿಸಿದ್ದಾರೆ. ಈ ಪ್ರಕರಣವನ್ನು ಮತ್ತೆ ಟ್ರಯಲ್ ಕೋಟ್ರ್ ಗೆ ಕಳುಹಿಸಲಾಗಿದ್ದು, ಪಿಸ್ಟೋರಿಯಸ್‍ಗೆ ತಕ್ಕ ಶಿಕ್ಷೆ ಪ್ರಮಾಣ ಪ್ರಕಟಿಸಲು ತಿಳಿಸಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೊಲೆ ಆರೋಪ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆ ಇದೆ. ನ್ಯಾಯಮೂರ್ತಿಗಳು ಮಾತ್ರ ಈ ಶಿಕ್ಷೆ ಪ್ರಮಾಣ ಕಡಿಮೆ ಮಾಡುವ ಅಧಿಕಾರ ಹೊಂದಿರುತ್ತಾರೆ. ಹಾಗಾಗಿ ಪಿಸ್ಟೋರಿಯಸ್ ವೃತ್ತಿಜೀವನ ಬಹುತೇಕ ಅಂತ್ಯಗೊಂಡಂತಾಗಿದೆ. ಅಂದಹಾಗೆ ಕೆಳ ನ್ಯಾಯಾಲಯ `ಖಂಡನೀಯ ಹತ್ಯೆ' ಆರೋಪದಡಿ 5 ವರ್ಷ ಸೆರೆವಾಸ ವಿಧಿಸಿತ್ತು. ಅದರ ವಿರುದ್ಧ ರೀವಾ ಪೋಷಕರು ಮೇಲ್ಮನವಿ ಸಲ್ಲಿಸಿದ್ದರು.
Advertisement