
ರಾಯ್ ಪುರ: ಸುದೀರ್ಘ 33 ವರ್ಷಗಳ ಅವಧಿಯಲ್ಲಿ ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಸ್ಪರ್ಧೆಯಲ್ಲಿ ಪದಕವನ್ನು ಸಂಪಾದಿಸಿದೆ.
ರೋಚಕ ಟೈಬ್ರೇಕರ್‍ನಲ್ಲಿ ಅಂತ್ಯಗೊಂಡ ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಭಾರತ, ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಟೂರ್ನಿಯಲ್ಲಿ ಪದಕದ ಬರವನ್ನು ನೀಗಿಸಿಕೊಂಡಿದೆ. ಭಾನುವಾರ ಸರ್ದಾರ್ ವಲ್ಲಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಕಂಚಿನ ಪದಕದ ರೋಚಕ ಪಂದ್ಯದಲ್ಲಿ ಭಾರತ ಮತ್ತು ಹಾಲೆಂಡ್ ತಂಡಗಳು ನಿಗದಿತ ಅವಧಿ ಮುಕ್ತಾಯಕ್ಕೆ 5-5 ಗೋಲುಗಳ ರೋಚಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದವು.
ಹಾಗಾಗಿ ಫಲಿತಾಂಶವನ್ನು ಟೈಬ್ರೇಕರ್ ಮೂಲಕ ನಿರ್ಧರಿಸಲಾಯಿತು. ಹೆಚ್ಚು ರೋಚಕವಾಗಿದ್ದ ಟೈಬ್ರೇಕರ್‍ನಲ್ಲಿ ಭಾರತ 3-2 ಅಂತರದ ಜಯ ಸಾಧಿಸಿ ಕಂಚಿನ ಪದಕವನ್ನು ಪಡೆಯಿತು. ಭಾರತದ ಗೋಲ್ ಕೀಪರ್ ಶ್ರೀಜೇಶ್ ಪ್ರದರ್ಶನ ಪ್ರಮುಖವಾಯಿತು. ಭಾರತ ತಂಡದ ಪರ ರಮಣ್‍ದೀಪ್ ಸಿಂಗ್ 39, 51ನೇ, ರೂಪಿದರ್ ಪಾಲ್ ಸಿಂಗ್ 47, 55ನೇ, ಆಕಾಶ್ ದೀಪ್ ಸಿಂಗ್ 56ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಹಾಲೆಂಡ್ ತಂಡದ ಪರ ಮಿರ್ಕೊ 9ನೇ, ನಿಕ್ ವ್ಯಾನ್ ಡರ್ 25ನೇ ಮತ್ತು ಮಿಂಕ್ ವ್ಯಾನ್ ಡರ್ 54, 58ನೇ ನಿಮಿಷದಲ್ಲಿ ಗೋಲು ಬಾರಿಸಿದರು.
Advertisement