ರಹಾನೆ ಮತ್ತೆ ಶತಕ, ಆಫ್ರಿಕೆಗೆ ದೈತ್ಯ ಗುರಿ

ಉತ್ತಮ ಫಾರ್ಮ್ ಗೆ ಮರಳಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರ ಮತ್ತೊಂದು ಆಕರ್ಷಕ ಶತಕದಿಂದಾಗಿ ಆತಿಥೇಯ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ 4ನೇ..
4ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಮ್ಲಾ ಮತ್ತು ಎಬಿಡಿವಿಲಿಯರ್ಸ್
4ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಮ್ಲಾ ಮತ್ತು ಎಬಿಡಿವಿಲಿಯರ್ಸ್

ನವದೆಹಲಿ: ಉತ್ತಮ ಫಾರ್ಮ್ ಗೆ ಮರಳಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರ ಮತ್ತೊಂದು ಆಕರ್ಷಕ ಶತಕದಿಂದಾಗಿ ಆತಿಥೇಯ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಹಿಡಿತ ಸಾಧಿಸಿದೆ.

ಇಲ್ಲಿನ ಪಿsರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ತನ್ನ ದ್ವಿತೀಯ ಇನಿಂಗ್ಸ್ ಅನ್ನು 5 ವಿಕೆಟ್ ನಷ್ಟಕ್ಕೆ 267 ರನ್ ಮೊತ್ತಕ್ಕೆ ಡಿಕ್ಲೇರ್  ಮಾಡಿಕೊಂಡ ಭಾರತ, ಪ್ರವಾಸಿಗರಿಗೆ ಪಂದ್ಯ ಗೆಲ್ಲಲು 481 ರನ್‍ಗಳ ದೊಡ್ಡ ಗುರಿಯನ್ನು ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ದಿನಾಂತ್ಯದ ಹೊತ್ತಿಗೆ 2 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದೆ. ಪಂದ್ಯ ಮುಕ್ತಾಯವಾಗಲು ಇನ್ನೊಂದೇ ದಿನ ಬಾಕಿಯಿದ್ದು, ಅಷ್ಟರಲ್ಲಿ ಗೆಲವಿಗಾಗಿ ಇನ್ನೂ 409 ರನ್ ಪೇರಿಸುವ ಒತ್ತಡದಲ್ಲಿರುವ ಹರಿಣಗಳ ಪಡೆ, ಈ  ಸವಾಲನ್ನು ಮೆಟ್ಟಿ ನಿಲ್ಲಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ.

ನಿರಾಸೆ ತಂದ ಕೊಹ್ಲಿ: ಪಂದ್ಯದ ಮೂರನೇ ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದ್ದ ಭಾರತ ತಂಡ, ಭಾನುವಾರ ತನ್ನ ಇನಿಂಗ್ಸ್ ಮುಂದುವರಿಸಿದ ಕೆಲವೇ ಹೊತ್ತಿನಲ್ಲಿ ನಾಯಕ  ವಿರಾಟ್ ಕೊಹ್ಲಿಯವರನ್ನು ಕಳೆದುಕೊಂಡಿತು. ಶನಿವಾರ ದಿನಾಂತ್ಯಕ್ಕೆ 83 ರನ್‍ಗಳೊಂದಿಗೆ ಅಜೇಯರಾಗುಳಿ ಯುವ ಮೂಲಕ ಶತಕ ಸಿಡಿಸುವ ನಿರೀಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ, ಭಾನುವಾರ  ತಮ್ಮ ಮೊತ್ತಕ್ಕೆ ಕೇವಲ 5 ರನ್ ಮಾತ್ರ ಸೇರಿಸಲು ಶಕ್ತರಾದರು.

ಅಜಿಂಕ್ಯ ಶತಕ: ದಿನದಾಟದಲ್ಲಿ ಟೀಂ ಇಂಡಿಯಾ ಪಾಳಯದಲ್ಲಿ ಮಂದಹಾಸ ಮಿನುಗಿಸಿದ್ದು ಅಜಿಂಕ್ಯ ರಹಾನೆ. ಶನಿವಾರ ದಿನಾಂತ್ಯಕ್ಕೆ 52 ರನ್‍ಗಳೊಂದಿಗೆ ಔಟಾಗದೇ ಉಳಿದಿದ್ದ ಅವರು,  ಕೊಹ್ಲಿ ಹೊರನಡೆದ ತರುವಾಯ ಹರಿಣಗಳನ್ನು ಕಾಡಲಾರಂಭಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಾಹಾ, ಕ್ರೀಸ್‍ನಲ್ಲಿ ಉತ್ತಮ ಬೆಂಬಲ ನೀಡಿದರು. ಈ ಜೋಡಿ, 5ನೇ  ವಿಕೆಟ್‍ಗೆ ಮುರಿಯದ 56 ರನ್‍ಗಳ ಜತೆಯಾಟವಾಡುವ ಮೂಲಕ ಭಾರತ ತಂಡದ ಮೊತ್ತವನ್ನು 260 ರನ್ ಗಡಿ ದಾಟಿಸಿತು. ಇದೇ ವೇಳೆ, ಶತಕದ ಸನಿಹದಲ್ಲಿದ್ದ ರಹಾನೆಯವರಿಗೆ ಅದನ್ನು ಪೂರೈಸಲು ಕೊಹ್ಲಿ ಅನುವು ಮಾಡಿಕೊಟ್ಟರು. ಇನಿಂಗ್ಸ್‍ನ 101ನೇ ಓವರ್‍ನ ಮೊದಲ ಎಸೆತದಲ್ಲಿ ರಹಾನೆ, ಒಂದು ರನ್ ಗಳಿಸುವ ಮೂಲಕ ವೃತ್ತಿಜೀವನದ 4ನೇ ಶತಕ ಸಿಡಿಸಿದ  ಕೂಡಲೇ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು.

ಮತ್ತೆ ಅಶ್ವಿನ್ ಮಿಂಚು: ಭಾರತ ನೀಡಿದ್ದ 481 ರನ್‍ಗಳ ಬೃಹತ್ ಗುರಿಯೊಂದಿಗೆ ತನ್ನ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಆರಂಭದಲ್ಲೇ ಭಾರತದ ಸ್ಪಿನ್ ದಾಳಿಗೆ ಸಿಲುಕಿತು. ರವಿಚಂದ್ರನ್  ಅಶ್ವಿನ್, ತಾವು ಮಾಡಿದ ಇನಿಂಗ್ಸ್‍ನ 5ನೇ ಓವರ್‍ನಲ್ಲಿ ಆರಂಭಿಕ ಡೀನ್ ಎಲ್ಗರ್ ಅವರ ವಿಕೆಟ್ ಪಡೆದು ಭಾರತಕ್ಕೆ ಮೊದಲ ಯಶಸ್ಸು ತಂದರು. ಆದರೆ, ಆನಂತರ ಜತೆಯಾಟ ಮತ್ತೊಬ್ಬ  ಆರಂಭಿಕ ಟೆಂಬಾ ಬವುಮಾ ಹಾಗೂ ಮೂರನೇ ಕ್ರಮಾಂಕದ ಹಾಶೀಂ ಆಮ್ಲಾ, ತುಂಬಾ ಹೊತ್ತು ಭಾರತೀಯ ಬೌಲರ್‍ಗಳನ್ನು ಕಾಡಿದರು. ಆದರೆ, ಪುನಃ ಭಾರತದ ನೆರವಿಗೆ ಬಂದ ಅಶ್ವಿನ್,  ಇನಿಂಗ್ಸ್ ನ 43ನೇ ಓವರ್‍ನಲ್ಲಿ ಬುವುಮಾ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಕ್ಕೆ 2ನೇ ವಿಕೆಟ್ ಸಂಭ್ರಮ ತಂದರು. ಆಗ ಕ್ರೀಸ್‍ಗೆ ಆಗಮಿಸಿದ್ದು ಎಬಿ ಡಿವಿಲಿಯರ್ಸ್. ದಿನಾಂತ್ಯದ  ಹೊತ್ತಿಗೆ, 23 ರನ್ ಗಳಿಸಿರುವ ಹಾಶೀಂ ಆಮ್ಲಾ, 11 ರನ್ ಗಳಿಸಿರುವ ಎಬಿಡಿ, ಇನಿಂಗ್ಸ್ ಮೊತ್ತವನ್ನು 72 ರನ್‍ಗಳಿಗೆ ಮುಟ್ಟಿಸಿದರು.

ಆಮ್ಲಾಗೆ ಹೊಸ ಕುಖ್ಯಾತಿ!: ಕೇವಲ ಒಂದಂಕಿ ರನ್ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್ ಮನ್‍ಗಳ ಪಟ್ಟಿಯ ಅಗ್ರಸ್ಥಾನಕ್ಕೆ ದಕ್ಷಿಣ ಆಫ್ರಿಕಾ ತಂಡದ ನಾಯಕ  ಲಗ್ಗೆಯಿಟ್ಟಿದ್ದಾರೆ! ತಮ್ಮ ರನ್ ಖಾತೆ ತೆರೆಯಲು 40 ಎಸೆತ ತೆಗೆದುಕೊಂಡ ಅವರು, 6 ರನ್ ಪೇರಿಸಲು 106 ಎಸೆತ ತೆಗೆದುಕೊಂಡರು! ಈ ಮೂಲಕ, ಆಸ್ಟ್ರೇಲಿಯಾದ ಕಾರ್ಲ್ ರ್ಯಾಕಿಮನ್  (102 ಎಸೆತಗಳಲ್ಲಿ 9 ರನ್) ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದರು.

ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 334
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 121
ಭಾರತ ದ್ವಿತೀಯ ಇನಿಂಗ್ಸ್ 100.1

ಓವರ್‍ಗಳಲ್ಲಿ 5 ವಿಕೆಟ್‍ಗೆ 267
(ಶನಿವಾರ ದಿನಾಂತ್ಯಕ್ಕೆ 4 ವಿಕೆಟ್‍ಗೆ 190)
ವಿರಾಟ್ ಕೊಹ್ಲಿ ಎಲ್‍ಬಿ ಬಿ ಅಬ್ಬೊಟ್ 88
ಅಜಿಂಕ್ಯ ರಹಾನೆ ಔಟಾಗದೇ 100
ವೃದ್ಧಿಮಾನ್ ಸಾಹಾ ಔಟಾಗದೇ 23
ಇತರೆ (ಲೆಗ್‍ಬೈ 2, ನೋಬಾಲ್ 2) 04
ವಿಕೆಟ್ ಪತನ: 5-211 (ವಿರಾಟ್ ಕೊಹ್ಲಿ)
ಬೌಲಿಂಗ್ ವಿವರ: ಮೊರ್ಕೆಲ್ 21-6-51-3, ಅಬ್ಬೊಟ್
22-9-47-1, ಪೀಟ್ 18-1-53-0, ತಾಹಿರ್
26.1-4-74-1, ಎಲ್ಗರ್ 13-1-40-0
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 72
ಓವರ್‍ಗಳಲ್ಲಿ 2 ವಿಕೆಟ್‍ಗೆ 72
ಎಲ್ಗರ್ ಸಿ ರಹಾನೆ ಬಿ ಅಶ್ವಿನ್ 4
ಬವುಮಾ ಬಿ ಅಶ್ವಿನ್ 34
ಹಾಶೀಂ ಆಮ್ಲಾ ಔಟಾಗದೇ 23
ಎಬಿ ಡಿವಿಲಿಯರ್ಸ್ ಔಟಾಗದೇ 11
ವಿಕೆಟ್  ಪತನ : 1-5 (ಎಲ್ಗರ್), 2-49 (ಬವುಮಾ ).
ಬೌಲಿಂಗ್ ವಿವರ: ಇಶಾಂತ್ ಶರ್ಮಾ 12-7-16-0, ರವಿಚಂದ್ರನ್ ಅಶ್ವಿನ್ 23-13-29-2, ರವೀಂದ್ರ ಜಡೇಜಾ
23-16-10-0, ಉಮೇಶ್ ಯಾದವ್ 9-6-6-0, ಶಿಖರ್ ಧವನ್ 3-1-9-0, ಮುರಳಿ ವಿಜಯ್ 2-0-2-0

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com