ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)

ಸೈನಾ ನೆಹ್ವಾಲ್ ಗೆ ಪ್ರಶಸ್ತಿ ಗುರಿ

ಸಾಕಷ್ಟು ವಿಶ್ರಾಂತಿ ಪಡೆದ ನಂತರ ಮಹತ್ವದ ಪಂದ್ಯಾವಳಿಗೆ ಸಜ್ಜಾಗಿರುವ ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರದಿಂದ ಆರಂಭವಾಗುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಸೂಪರ್..
Published on

ದುಬೈ: ಸಾಕಷ್ಟು ವಿಶ್ರಾಂತಿ ಪಡೆದ ನಂತರ ಮಹತ್ವದ ಪಂದ್ಯಾವಳಿಗೆ ಸಜ್ಜಾಗಿರುವ ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರದಿಂದ ಆರಂಭವಾಗುತ್ತಿರುವ  ಬಿಡಬ್ಲ್ಯೂಎಫ್  ವಿಶ್ವ ಸೂಪರ್ ಸಿರೀಸ್ ಫೈನಲ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಅಂತೆಯೇ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಇಂಡೋನೇಷಿಯಾ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಫೈನಲ್‍ನಲ್ಲಿ ಮುಗ್ಗರಿಸಿದರೂ, ಮನೋಜ್ಞ ಪ್ರದರ್ಶನ  ನೀಡಿದ ಕೆ. ಶ್ರೀಕಾಂತ್ ಕೂಡ ವರ್ಷದ ಕೊನೆಯ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ತುಡಿತಕ್ಕೆ ಒಳಗಾಗಿದ್ದಾರೆ. ಪಾದದ ಹಿಮ್ಮಡಿ ನೋವಿನಿಂದಾಗಿ ಪ್ರತಿಷ್ಠಿತ ಚೀನಾ ಸೂಪರ್ ಸಿರೀಸ್ ಪ್ರೀಮಿಯರ್ ಪಂದ್ಯಾವಳಿಯಲ್ಲಿ ರನ್ನರ್‍ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಸೈನಾ, ಹಾಂಕಾಂಗ್ ಓಪನ್ ಪಂದ್ಯಾವಳಿಯಿಂದಲೂ ವಂಚಿತವಾಗಿದ್ದರು.

ಇನ್ನು ಹ್ಯಾಮ್ಡಾನ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಮಹಿಳೆಯರ `ಎ' ಗುಂಪಿನಲ್ಲಿರುವ ಸೈನಾ, ಆರಂಭಿಕ ಪಂದ್ಯದಲ್ಲಿ ಜಪಾನ್‍ನ ನೊಜೊಮಿ ಒಕುಹಾರ ಎದುರು ಸೆಣಸಲಿದ್ದಾರೆ. ``ಬ್ಯಾಡ್ಮಿಂಟನ್‍ನಲ್ಲಿ ಪ್ರಮುಖ ಆಟಗಾರರ ಜತೆಗೆ ಸೆಣಸುವುದು ಅದರಲ್ಲೂ ಗಾಯದ ಸಮಸ್ಯೆಯಿಂದ ಕೂಡಿರುವಾಗಲಂತೂ ತುಸು ತ್ರಾಸದಾಯಕವೇ. ಹೀಗಾಗಿ ಈ  ಪಂದ್ಯಾವಳಿಯಲ್ಲಿ ನನ್ನಿಂದಾದಷ್ಟು ಉತ್ತಮ ಪ್ರದರ್ಶನ ನೀಡಲು ನಿರ್ಧರಿಸಿದ್ದೇನೆ'' ಎಂದು ಸೈನಾ ಪಂದ್ಯಾವಳಿಯ ಮುನ್ನಾ ದಿನದಂದು ತಿಳಿಸಿದರು. ಇನ್ನು ಈ ಋತುವಿನ ಆರಂಭದಲ್ಲಿ ಸ್ವಿಸ್ ಓಪನ್, ಇಂಡಿಯಾ ಓಪನ್ ಪಂದ್ಯಾವಳಿಗಳಲ್ಲಿ ಗೆಲುವು ಸಾಧಿಸಿದ ಶ್ರೀಕಾಂತ್, ಆನಂತರದ ಐದು ಪಂದ್ಯಾವಳಿಗಳಲ್ಲಿ ದಯನೀಯ ಪ್ರದರ್ಶನ ನೀಡಿದರಾದರೂ, ಇಂಡೋನೇಷಿಯಾ ಓಪನ್‍ನಲ್ಲಿ ಫೈನಲ್ ಪ್ರವೇಶಿಸಿ ಮತ್ತೆ ಫಾರ್ಮ್ ಗೆ ಮರಳಿದ್ದರು. ಅವರು ಮೊದಲ ಸುತ್ತಿನಲ್ಲಿ ಜಪಾನ್ ನ  ಕೆಂಟೋ ಮೊಮೊಟಾ ಎದುರು ಕಾದಾಡಲಿದ್ದಾರೆ.

ಜಪಾನ್ ಆಟಗಾರನ ಎದುರು ಶ್ರೀಕಾಂತ್ 33 ಸಮಬಲ ಹೊಂದಿದ್ದಾರೆ. ಪುರುಷರ `ಬಿ' ಗುಂಪಿನಲ್ಲಿರುವ ಶ್ರೀಕಾಂತ್ ಮೊಮೊಟಾ ನಂತರ ರೌಂಡ್ ರಾಬಿನ್ ಮಾದರಿಯ ಪಂದ್ಯಾವಳಿಯಲ್ಲಿ  ಚೈನೀಸ್ ತೈಪೆಯ ಚೌ ಟಿನ್ ಚೆನ್ ಮತ್ತು ಡೆನ್ಮಾರ್ಕ್‍ನ ವಿಕ್ಟರ್ ಆಕ್ಸೆಲ್‍ಸೆನ್ ಎದುರು ಕಾದಾಡಲಿದ್ದಾರೆ. ರೌಂಡ್ ರಾಬಿನ್ ಹಂತದ ಪ್ರತೀ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದವರು  ಸೆಮಿಫೈನಲ್ ಗೆ ಅರ್ಹತೆ ಪಡೆಯಲಿದ್ದಾರೆ. ಕಳೆದ ವರ್ಷ ಸೈನಾ ಹಾಗೂ ಶ್ರೀಕಾಂತ್ ಅಂತಿಮ ನಾಲ್ಕರ ಘಟ್ಟ ತಲುಪಿದ್ದರಾದರೂ, ಪ್ರಶಸ್ತಿ ಪಡೆಯುವುದರಿಂದ ವಂಚಿತವಾಗಿದ್ದರು.

ಯಾವುದೇ ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡಬ್ಲ್ಯೂಎಫ್  ವಿಶ್ವ ಸೂಪರ್ ಸಿರೀಸ್ ಫೈನಲ್ಸ್ ಪಂದ್ಯಾವಳಿಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಚೀನಾದಲ್ಲಿ ಗಾಯಗೊಂಡು ಈಗಷ್ಟೇ ನಾನು  ಚೇತರಿಸಿಕೊಂಡಿದ್ದೇನೆ. ಆದಾಗ್ಯೂ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ.
-ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ಆಟಗಾರ್ತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com