
ದುಬೈ: ಪ್ರತಿಷ್ಠಿತ ವಿಶ್ವ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸವಾಲನ್ನು ಮುಂದುವರೆಸಬೇಕಿದ್ದ ದೇಶದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕೆ. ಶ್ರೀಕಾಂತ್ ಮೊದಲ ಹಂತದಲ್ಲಿಯೇ ಮುಗ್ಗರಿಸಿದ್ದಾರೆ.
ವಿಶ್ವದ ಎಂಟು ಅಗ್ರ ಆಟಗಾರರು ಪಾಲ್ಗೊಂಡಿರುವ ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ಈ ಇಬ್ಬರು ಆಟಗಾರರೂ ಹಿನ್ನಡೆ ಅನುಭವಿಸಿದರು. ಇಲ್ಲಿನ ಹ್ಯಾಮ್ಡನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪುರುಷರ ವಿಭಾಗದ `ಬಿ' ಗುಂಪಿನ ಆರಂಭಿಕ ಪಂದ್ಯದಲ್ಲಿ ಕೆ. ಶ್ರೀಕಾಂತ್ ಜಪಾನ್‍ನ ಕೆಂಟೊ ಮೊಮೊಟಾ ಎದುರು 13-21, 13-21ರ ಎರಡು ನೇರ ಗೇಮ್ಗಳ ಆಟದಲ್ಲಿ ಪರಾಭವಗೊಂಡರೆ, ಇತ್ತ ಮಹಿಳೆಯರ ವಿಭಾಗದ `ಎ' ಗುಂಪಿನಲ್ಲಿ ಜಪಾನಿನ ನೊಜೊಮಿ ಒಕುಹಾರ ವಿರುದ್ಧದ ಪಂದ್ಯದಲ್ಲಿ ಅತ್ಯಂತ ದಯನೀಯ ಪ್ರದರ್ಶನ ನೀಡಿದ ವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ 14-21, 6-21 ಅಂತರದ ಎರಡು ನೇರ ಗೇಮ್ಗಳ ಆಟದಲ್ಲಿ ಆಘಾತ ಅನುಭವಿಸಿದರು.
``ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಈ ಮಹತ್ವದ ಪಂದ್ಯಾವಳಿಯಲ್ಲಿ ಆಡಲು ಬಂದಿದ್ದೇನೆ. ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡಲಷ್ಟೇ ನಾನು ಆದ್ಯತೆ ವಹಿಸಿದ್ದೇನೆ'' ಎಂದು ಎಂದು ನುಡಿದಿದ್ದ ಸೈನಾ, ಇನ್ನೂ ಗಾಯದ ಬೇನೆಯಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲವೇನೋ ಎಂಬಷ್ಟರ ಮಟ್ಟಿಗೆ ಇಂದಿನ ಪಂದ್ಯದಲ್ಲಿ ದಯನೀಯ ಪ್ರದರ್ಶನ ನೀಡಿದರು. ಮೊದಲ ಹಂತದಲ್ಲೇ ಸೋಲಿನ ಆಘಾತ ಅನುಭವಿಸಿರುವ ಸೈನಾ ಇದೀಗ ಡಿ. 10ರಂದು ಮುಂದಿನ ಹಂತದಲ್ಲಿ ವಿಶ್ವದ ನಂ.1 ಆಟಗಾರ್ತಿ ಸ್ಪೇನ್‍ನ ಕೆರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದು, ಈ ಪಂದ್ಯ ಅವರ ಪಾಲಿಗೆ ಅತೀವ ಮಹತ್ವ ಪಡೆದುಕೊಂಡಿದೆ. ಅಂತೆಯೇ ಶ್ರೀಕಾಂತ್ ಕೂಡ ಅದೇ ದಿನ ಡೆನ್ಮಾರ್ಕ್‍ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೆಣಸಲಿದ್ದಾರೆ. ಇನ್ನು ಇದಕ್ಕೂ ಮುಂಚೆ ನಡೆದ ಪುರುಷರ ವಿಭಾಗದಲ್ಲಿ ಭಾರತದ ಕೆ. ಶ್ರೀಕಾಂತ್, ಇಲ್ಲಿ ಜಪಾನ್ ಆಟಗಾರನ ಎದುರು ದಿಟ್ಟ ಆಟವಾಡದೆ ಸುಲಭವಾಗಿ ಮಣಿದರು.
ಐಒಸಿ ಸದಸ್ಯತ್ವ ಸ್ಥಾನದ ಮೇಲೆ ನೆಹ್ವಾಲ್ ಕಣ್ಣು
ಲೌಸಾನ್ನೆ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಅಥ್ಲೆಟಿಕ್ಸ್ ಆಯೋಗದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗಾಗಿ ಮುಂದಿನ ವರ್ಷ ಆಗಸ್ಟ್‍ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದ ಅಗ್ರಶ್ರೇ ಯಾಂಕಿತೆ ಸೈನಾ ನೆಹ್ವಾಲ್ ನಿರ್ಧರಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ವೇಳೆಯಲ್ಲಿಯೇ ಈ ಚುನಾವಣೆಯೂ ನಡೆಯಲಿದೆ. ಈ ನಾಲ್ಕು ಸ್ಥಾನಗಳಿಗಾಗಿ, ವಿಶ್ವದಾದ್ಯಂತ ಒಟ್ಟು 24 ಅಗ್ರ ಕ್ರೀಡಾಪಟುಗಳು ಸ್ಪರ್ಧಿಸಲು ನಿರ್ಧರಿಸಿದ್ದು, ಅವರಲ್ಲಿ ಸೈನಾ ಸಹ ಒಬ್ಬರು ಎಂದು ಐಬಿಎನ್ ಲೈವ್ ಹೇಳಿದೆ. ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿರುವ ಕ್ರೀಡಾಳುಗಳು ಮಾತ್ರವೇ ಈ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
Advertisement