
ಲಾಹೋರ್: ಭಾರತ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕುರಿತಂತೆ ಬಿಸಿಸಿಐನ ತೀರ್ಮಾನವನ್ನು ಕಾದು ಕಾದು ಸುಸ್ತಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಈ ಸರಣಿ ಮೇಲಿನ ಆಸೆಯನ್ನು ಕೈಬಿಡಲು ನಿರ್ಧರಿಸಿದೆ. ಈ ಕುರಿತು ಬಿಸಿಸಿಐಗೆ ಪತ್ರ ಬರೆದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ 48 ಗಂಟೆಗಳಲ್ಲಿ ಸರಣಿ ಕುರಿತಂತೆ ಅಂತಿಮ ತೀರ್ಮಾನ ತಿಳಿಸುವಂತೆ ಕೇಳಿಕೊಂಡಿತ್ತು.
ಆದರೆ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸೋಮವಾರ ಪಿಸಿಬಿ ತನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಕುರಿತು ಮಾತನಾಡಿರುವ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್, ಈ ಅಧ್ಯಾಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
``ಹೌದು, ಬಿಸಿಸಿಐನಿಂದ ನಮಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಶನಿವಾರ ಸಂಜೆಯವರೆಗೂ ಈ ಕುರಿತು ಸಿಸಿಐನ ನಿರ್ಧಾರಕ್ಕಾಗಿ ಕಾಯುತ್ತಿದ್ದೆವು. ಹಾಗಾಗಿ ಈಗ ಈ ಅಧ್ಯಾಯವನ್ನು ಅಂತ್ಯಗೊಳಿಸಲಿದ್ದೇವೆ. ಈ ಕುರಿತ ಅಧಿಕೃತ ನಿರ್ಧಾರವನ್ನು ಸೋಮವಾರ ತಿಳಿಸುತ್ತೇವೆ ಎಂದು ಖಾನ್ ತಿಳಿಸಿದ್ದಾರೆ.
ಈ ಸರಣಿಯನ್ನು ಆಡಲು ನಾವು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಸರಣಿಯ ಸ್ಥಳವನ್ನು ಯುಎಇಯಿಂದ ಶ್ರೀಲಂಕಾಗೆ ಸ್ಥಳಾಂತರಿಸಲು ಮನವಿ ಮಾಡಿದ್ದೆವು. ಈ ಎಲ್ಲ ಪ್ರಯತ್ನಗಳು ವ್ಯರ್ಥವಾಗಿವೆ. ಕಳೆದ ವರ್ಷ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿದ್ದೆವು. ಹಾಗಾಗಿ ಸರಣಿ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದೆವು.
ಸರಣಿ ಸಾಧ್ಯವಾಗದಿರುವುದು ಭಾರತ ಮತ್ತು ಪಾಕಿಸ್ತಾನದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದು ಶಹರ್ಯಾರ್ ತಿಳಿಸಿದ್ದಾರೆ. ಈ ಸರಣಿಯ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಯ ದ್ವಿಪಕ್ಷೀಯ ಸರಣಿ ಮಟ್ಟದಲ್ಲಿ ಚರ್ಚೆ ನಡೆಸುತ್ತೇವೆ. ಸರಣಿ ಸಾಧ್ಯವಾಗದಿರುವುದಕ್ಕೆ ಪಾಕಿಸ್ತಾನ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕಳೆದ ವರ್ಷ ಬಿಸಿಸಿಐ, ಪಿಸಿಬಿ ಒಪ್ಪಂದ ಮಾಡಿಕೊಳ್ಳುವ ಮೂಲಕ 2015ರಿಂದ 2023ರವರೆಗೆ ಒಟ್ಟು 6 ದ್ವಿಪಕ್ಷೀಯ ಸರಣಿಗಳನ್ನಾಡಲು ನಿರ್ಧರಿಸಲಾಗಿತ್ತು. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಡಿಲ್ಲ.
Advertisement