

ಪ್ರವಾಸಿ ಜಾರ್ಖಂಡ್ ಸ್ಪಿನ್ನರ್‍ಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಯ ಪಂದ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಬ್ಯಾಟ್ಸ್‌ಮನ್‌ಗಳ ಬೇಜವಾಬ್ದಾರಿತನದ ಆಟದಿಂದಾಗಿ ಉದಯೋನ್ಮುಖ ಆಲ್‌ರೌಂಡರ್ ಜೆ.ಸುಚಿತ್ ಅವರ ಆಲ್‌ರೌಂಡ್ ಪ್ರದರ್ಶನ ನೀರಿನಲ್ಲಿ ಮಾಡಿದ ಹೋಮದಂತಾಯಿತು. ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅವಕಾಶವನ್ನು ಕೈಚೆಲ್ಲಿದ ಕರ್ನಾಟಕ, 47 ರನ್‌ಗಳ ಸೋಲು ಕಂಡಿದೆ.
ಬಿ ಗುಂಪಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಹಾಲಿ ಚಾಂಪಿಯನ್ನರು, ಜಾರ್ಖಂಡ್ ವಿರುದ್ಧ ಸೋಲುವ ಮೂಲಕ, ಕ್ವಾರ್ಟರ್ ಫೈನಲ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದ್ದಾರೆ. ಇಲ್ಲಿನ ಆಲೂರು-2 ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಜ್ಯ ತಂಡದ ಸೋಲಿಗೆ ಕಾರಣವಾಗಿದ್ದು ಬ್ಯಾಟಿಂಗ್ ವೈಫಲ್ಯ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಾರ್ಖಂಡ್, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿದರೆ, ಗುರಿ ಬೆನ್ನಟ್ಟಿದ ಕರ್ನಾಟಕ, 45 ಓವರ್‌ಗಳಲ್ಲಿ 169 ರನ್‌ಗಳಿಗೆ ಸರ್ವಪತನ ಕಂಡಿತು.
ಮಹತ್ವದ ಪಂದ್ಯದಲ್ಲಿ ಗೆಲ್ಲಲು 217 ರನ್‌ಗಳ ಸುಲಭ ಗುರಿ ಪಡೆದ ಕರ್ನಾಟಕಕ್ಕೆ ಮತ್ತೊಮ್ಮೆ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟರು. ಅಭಿಷೇಕ್ ರೆಡ್ಡಿ (5), ಮಯಾಂಕ್ ಅಗರ್ವಾಲ್ (20), ನಾಯಕ ಮನೀಶ್ ಪಾಂಡೆ (1), ಕರುಣ್ ನಾಯರ್ (24), ಶ್ರೇಯಸ್ ಗೋಪಾಲ್ (0) ಜವಾಬ್ದಾರಿ ಪ್ರದರ್ಶಿಸಲಿಲ್ಲ. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕೆ.ಎಲ್.ರಾಹುಲ್ (42) ಅರ್ಧಶತಕದ ಗಡಿಯಲ್ಲಿ ಎಡವುತ್ತಲೇ ತಂಡದ ಕುಸಿತ ಆರಂಭವಾಯಿತು. ಭಾರತ ಪರ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ (8) 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರೂ ತಂಡಕ್ಕೆ ಅದರಿಂದೇನೂ ಉಪಯೋಗವಾಗಲಿಲ್ಲ.
ಒಂದು ಹಂತದಲ್ಲಿ 130 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿದ್ದ ತಂಡಕ್ಕೆ ಆಲ್‌ರೌಂಡರ್ ಜೆ.ಸುಚಿತ್ (34) ಹಾಗೂ ಕೊನೆಯ ಸರದಿಯ ಆಟಗಾರ ಎಸ್.ಅರವಿಂದ್ (ಔಟಾಗದೆ 22) ಗೆಲುವಿನ ಆಸೆ ಚಿಗುರಿಸಿದರು. ಒತ್ತಡದ ಸನ್ನಿವೇಶದಲ್ಲಿ ದಿಟ್ಟತನದ ಆಟವಾಡಿದ ಸುಚಿತ್ ಮತ್ತು ಅರವಿಂದ್ ಅಂತಿಮ ವಿಕೆಟ್‌ಗೆ 39 ರನ್ ಸೇರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರು. ಆದರೆ 45ನೇ ಓವರ್‌ನ ಕೊನೆಯ ಎಸೆತದಲ್ಲಿ ಸುಚಿತ್ ಔಟಾಗುವುದರೊಂದಿಗೆ ಆತಿಥೇಯರು ಟೂರ್ನಿಯಲ್ಲಿ ಎರಡನೇ ಸೋಲಿಗೆ ಶರಣಾದರು.
ಈ ಪಂದ್ಯಕ್ಕೆ ನಾಯಕ ವಿನಯ್ ಕುಮಾರ್ ಮತ್ತು ವೇಗಿ ಅಭಿಮನ್ಯು ಮಿಥುನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ತಂಡದ ನೇತೃತ್ವ ವಹಿಸಿದರು. ಟೂರ್ನಿಯಲ್ಲಿ ವಿನಯ್ ಸಾರಥ್ಯದಲ್ಲಿ ಸತತ ಮೂರು ಬಾರಿ ಟಾಸ್ ಸೋತಿದ್ದ ಕರ್ನಾಟಕ, ಪಾಂಡೆ ನಾಯಕತ್ವದಲ್ಲಿ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿತು. ಉತ್ತಮ ಆರಂಭದ ಹೊರತಾಗಿಯೂ ಎಡಗೈ ಸ್ಪಿನ್ನರ್ ಜೆ.ಸುಚಿತ್ (35ಕ್ಕೆ4) ಅವರ ಬಿಗು ದಾಳಿಯ ನೆರವಿನಿಂದ ಕರ್ನಾಟಕ ತಂಡ, ಪ್ರವಾಸಿ ಪಡೆಯನ್ನು 216 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸಾದಿಕ್ ಕಿರ್ಮಾನಿ ಬದಲು ವಿಕೆಟ್ ಕೀಪಿಂಗ್ ನಡೆಸಿದ ಕೆ.ಎಲ್.ರಾಹುಲ್ 3 ಸ್ಟಂಪಿಂಗ್ ಮೂಲಕ ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್ 50 ಓವರ್‍ಗಳಲ್ಲಿ 8 ವಿಕೆಟ್‍ಗೆ 216 ಇಶಾಂಕ್ 50, ಕುಮಾರ್ ಅಜೇಯ 47, ತಿವಾರಿ 43, ಸುಚಿತ್ 35ಕ್ಕೆ 4 ಕರ್ನಾಟಕ 45 ಓವರ್‍ಗಳಲ್ಲಿ 169 ರಾಹುಲ್ 42, ಸುಚಿತ್ 34, ಅರವಿಂದ್ ಅಜೇಯ 22.
Advertisement