
ದುಬೈ: ಆತಿಥೇಯ ಯುಎಇ ರಾಯಲ್ಸ್ ತಂಡದ ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದ ಇಂಡಿಯನ್ ಏಸಸ್ ತಂಡದ ಆಟಗಾರರು ಇಂಟರ್ ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ ಟೂರ್ನಿಯಲ್ಲಿ ಮುಖಭಂಗ ಅನುಭವಿಸಿದ್ದಾರೆ.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಇಂಡಿಯನ್ ಏಸಸ್ ತಂಡ 16-27 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು. ಈ ಸೋಲಿನ ಹೊರತಾಗಿಯೂ ಇಂಡಿಯನ್ ಏಸಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಪುರುಷರ ಲೆಜೆಂಡ್ಸ್ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಏಸಸ್‍ನ ಫ್ಯಾಬ್ರಿಸ್ ಸ್ಯಾಂಟೋಸ್ 0-6 ಅಂತರದಲ್ಲಿ ರಾಯಲ್ಸ್ ನ ಕಾರ್ಲೊಸ್ ಮೊಯಾ ವಿರುದ್ಧ ತೀವ್ರ ಹಿನ್ನಡೆ ಅನುಭವಿಸಿದರು. ಆ ಮೂಲಕ ಏಸಸ್ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ನಂತರದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಏಸಸ್‍ನ ಅಗ್ನೀಸ್ಕಾ ರಾಡ್ವಾಂಸ್ಕಾ 6-3 ಅಂತರದ ಮುನ್ನಡೆಯೊಂದಿಗೆ ರಾಯಲ್ಸ್ ನ ಬೆಲಿಂಡಾ ಬೆನ್ಸಿಕ್ ವಿರುದ್ಧ ಮೇಲುಗೈ ಸಾಧಿಸಿ, ಪಂದ್ಯದಲ್ಲಿ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.
ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ 5-6 ಅಂತರದಲ್ಲಿ ರಾಯಲ್ಸ್ ನ ಬ್ರೌನ್ ಮತ್ತು ಪ್ಲಿಸ್ಕೊವಾ ಜೋಡಿ ವಿರುದ್ಧ ಸೋಲನುಭವಿಸಿತು. ಆ ಮೂಲಕ ಇಂಡಿಯನ್ ಏಸಸ್ ಮತ್ತೆ ಹಿನ್ನಡೆ ಅನುಭವಿಸು ವಂತಾಯಿತು. ಪುರುಷರ ಡಬಲ್ಸ್ ನಲ್ಲಿ ರಾಯಲ್ಸ್ ನ ಆ್ಯಂಡಿ ಮರ್ರೆ ಮತ್ತು ಮೆಲೊ ಜೋಡಿಯು 6-4 ಅಂತರದಲ್ಲಿ ಏಸಸ್‍ನ ಇವಾನ್ ಡೊಡಿಗ್ ಮತ್ತು ಟಾಮಿಕ್ ವಿರುದ್ಧ ಜಯಿಸಿತು. ಇನ್ನು ಪಂದ್ಯದ ಅಂತಿಮ ಸೆಣಸಿನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಏಸಸ್ ಪರ ಬೆರ್ನಾರ್ಡ್ ಟಾಮಿಕ್ ಕಣಕ್ಕಿಳಿದರೆ, ರಾಯಲ್ಸ್ ಪರ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಕಣಕ್ಕಿಳಿದರು. ಕಿರ್ಗಿಯೊಸ್ ಅವರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಟಾಮಿಕ್ 1-6 ಅಂತರದ ತೀವ್ರ ಹಿನ್ನಡೆ ಅನುಭವಿಸಿದ ಪರಿಣಾಮ ತಂಡ ಸೋಲನುಭವಿಸಬೇಕಾಯಿತು.
Advertisement