ಬ್ಲಾಟರ್ ಯುಗಾಂತ್ಯ?

ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ)ಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಫಿಫಾ ಹಂಗಾಮಿ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಅವರ ನಂತರ ಅಧ್ಯಕ್ಷ ಪದವಿಯ...
ಸೆಪ್ ಬ್ಲಾಟರ್ (ಸಂಗ್ರಹ ಚಿತ್ರ)
ಸೆಪ್ ಬ್ಲಾಟರ್ (ಸಂಗ್ರಹ ಚಿತ್ರ)

ಜ್ಯೂರಿಚ್: ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ)ಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಫಿಫಾ ಹಂಗಾಮಿ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಅವರ ನಂತರ ಅಧ್ಯಕ್ಷ ಪದವಿಯ  ಉತ್ತರಾಧಿಕಾರಿಯೆಂದೇ ಬಿಂಬಿತರಾಗಿದ್ದ ಉಪಾಧ್ಯಕ್ಷ ಮೈಕಲ್ ಪ್ಲಾಟಿನಿಗೆ ಎಂಟು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಶಿಕ್ಷೆಯ ಜತೆಗೆ, ಬ್ಲಾಟರ್ ಗೆ ರು. 26 ಲಕ್ಷ ಹಾಗೂ ಪ್ಲಾಟಿನಿಗೆ ರು. 35 ಲಕ್ಷ ದಂಡ ಕೂಡಾ ವಿಧಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಫಿಫಾದ ಆಂತರಿಕ ನೈತಿಕ ಸಮಿತಿಯು ಸೋಮವಾರ ಈ ತೀರ್ಪು ನೀಡಿದ್ದು, ತಕ್ಷಣಕ್ಕೆ  ಶಿಕ್ಷೆ ಜಾರಿಗೆ ಬರುವಂತೆ ಆದೇಶಿಸಿದೆ. ಶಿಕ್ಷೆಯ ಹಿನ್ನೆಲೆಯಲ್ಲಿ, ಫುಟ್ಬಾಲ್‍ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಂದ ಬ್ಲಾಟರ್ ಹಾಗೂ ಪ್ಲಾಟಿನಿ ನಿರ್ಬಂಧಕ್ಕೊಳಗಾಗಲಿದ್ದಾರೆ.

ಏನಿದು ಪ್ರಕರಣ?: 1998ರಿಂದ ಸತತವಾಗಿ ಫಿಫಾ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಬ್ಲಾಟರ್, 2011ರಲ್ಲಿ ಅಂದಿನ ಯೂರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಮೈಕಲ್ ಪ್ಲಾಟಿನಿ ಅವರ ಖಾತೆಗೆ ಸುಮಾರು 2  ಮಿಲಿಯನ್ ಡಾಲರ್ (ಅಂದಿನ ಲೆಕ್ಕಕ್ಕೆ ಸುಮಾರು ರು. 9 ಕೋಟಿ) ಸಂದಾಯ ಮಾಡಿದ್ದರು. ಇದು ಫಿಫಾದ ನಿಯಮಗಳಿಗೆ ವಿರುದ್ಧವಾದದ್ದು ಎಂದು ಹೇಳಲಾಗಿತ್ತು.

ಬ್ಲಾಟರ್ ಹಾದಿ ಅಂತ್ಯ?: 1975ರಲ್ಲಿ ಫಿಫಾದ ತಾಂತ್ರಿಕ ಸಮಿತಿ ನಿರ್ದೇಶಕರಾಗುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಗೆ ಕಾಲಿಟ್ಟಿದ್ದ ಬ್ಲಾಟರ್, ಅಂದಿನಿಂದ 2015ರವರೆಗೂ ಸಂಸ್ಥೆಯನ್ನು ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದವರು. ಆದರೆ, 2015ರಲ್ಲಿ ಅವರ ದುರಾಡಳಿತದ ವಿರುದ್ಧದ ಬಂಡಾಯ ಭುಗಿಲೆದ್ದು ಅವರನ್ನು ನ್ಯಾಯಾಲಯದ ಕಟಕಟೆಗೂ ಬಂದು ನಿಲ್ಲವಂತೆ ಮಾಡಿತು. ಕೆಲವೇ ದಿನಗಳ ಹಿಂದೆ ಫಿಫಾ ನೈತಿಕ ಸಮಿತಿಯಿಂದ 90  ದಿನಗಳ ನಿಷೇಧಕ್ಕೊಳಗಾಗಿದ್ದ ಬ್ಲಾಟರ್, ಇದೀಗ ಆರೋಪ ಸಾಬೀತಾಗಿ 8 ವರ್ಷಗಳ ನಿಷೇಧಕ್ಕೊಳಗಾಗಿರುವುದು ಫಿಫಾ ದಲ್ಲಿ ಅವರ ಆಡಳಿತದ ಯುಗಾಂತ್ಯ ಎಂದೇ ಬಣ್ಣಿಸಲಾಗಿದೆ.

ವಿಶೇಷ ಸಾಫ್ಟ್ ವೇರ್ ನಿಂದ ಪತ್ತೆ: 2011ರಲ್ಲಿ ಬ್ಲಾಟರ್ ಅವರು ಪ್ಲಾಟಿನಿಗೆ ನೀಡಿದ್ದ ರು. 9 ಕೋಟಿ ಹಣದ ಅಕ್ರಮ ವ್ಯವಹಾರವನ್ನು ವಿಶೇಷವಾಗಿ ರಚಿಸಲಾದ ಸಾಫ್ಟ್ ವೇರ್ ನಿಂದ ಪತ್ತೆ ಮಾಡಿದ್ದಾಗಿ, ಈ ಪ್ರಕರಣದ ತನಿಖೆ  ನಡೆಸುತ್ತಿದ್ದ ಫಿಫಾ ನೈತಿಕ ಸಮಿತಿಯು ಹೇಳಿದೆ. ಈ ವಿಶೇಷ ಸಾಫ್ಟ್ ವೇರ್ ನಿಂದ ಬ್ಲಾಟರ್ ಪ್ರಕರಣದಲ್ಲಿನ ಹಣ ಸಂದಾಯ ಮಾತ್ರವಲ್ಲದೇ ಎಲ್ಲಾ ಫಿಫಾ ವ್ಯವಹಾರಗಳನ್ನೂ ಇದರಿಂದ ಪತ್ತೆ ಹಚ್ಚಲಾಗಿದೆ ಎಂದು ಸಮಿತಿ ಹೇಳಿದೆ.  ಸ್ವಿಜರ್ಲೆಂಡ್‍ನ ನುರಿತ ಸಾಫ್ಟ್ ವೇರ್ ಎಂಜಿನಿಯರ್‍ಗಳಿಂದ ಇದನ್ನು ರಚಿಸಲಾಗಿದೆ ಎಂದೂ ಅದು ಹೇಳಿದೆ.

ರೇಸ್‍ನಲ್ಲಿ ಇರೋರು:
ಫಿಫಾ ಅಧ್ಯಕ್ಷ ಗಾದಿಯ ರೇಸ್‍ನಲ್ಲಿ ಮಂಚೂಣಿಯಲ್ಲಿದ್ದ ಮೈಕಲ್‍ಪ್ಲಾಟಿನಿ ಹೊರತುಪಡಿಸಿದಂತೆ, ಈ ಕೆಳಗಿನ ನಾಯಕರು ಪ್ರಬಲ ಆಕಾಂಕ್ಷಿಗಳಾಗಿದ್ದು, ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವ  ಸಾಧ್ಯತೆಗಳಿವೆ.

ಮೇಲ್ಮನವಿಗೆ ಚಿಂತನೆ
ಫಿಫಾ ನೈತಿಕ ಸಮಿತಿಯಿಂದ 8 ವರ್ಷಗಳ ನಿಷೇಧಕ್ಕೆ ಗುರಿಯಾಗಿರುವ ಬ್ಲಾಟರ್, ಇದೀಗ ಅಂತಾರಾಷ್ಟ್ರೀಯ ಕ್ರೀಡಾ ವ್ಯಾಜ್ಯ ಪರಿಹಾರ ನ್ಯಾಯಮಂಡಳಿಯಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ. ಅತ್ತ, ಈ ಬಗ್ಗೆ ಪ್ರತಿಕ್ರಿಯೆ  ನೀಡಿರುವ ಮೈಕಲ್ ಪ್ಲಾಟಿನಿ ಸಹ ಇದೇ ಇರಾದೆ ವ್ಯಕ್ತಪಡಿಸಿದ್ದಾರೆ. ಶಿಕ್ಷೆ ಜಾರಿಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಬ್ಲಾಟರ್, ಫಿಫಾ ನಡೆಯನ್ನು ಆಕ್ಷೇಪಿಸಿದರಲ್ಲದೆ, ಎಂದಿನಂತೆ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ  ಅಕ್ರಮಗಳಾಗಿಲ್ಲ ಎಂದರು. ಅಲ್ಲದೆ, ನನ್ನ ವಿರುದ್ಧದ ಈ ತೀರ್ಪಿನ ವಿರುದ್ಧ ಹೋರಾಡುತ್ತೇನೆ'' ಎಂದೂ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com