ನವದೆಹಲಿ: ದ.ಆಫ್ರಿಕಾದ ಸ್ಟಾರ್ ಕ್ರಿಕೆಟಿಗ, ವಿಶ್ವದ ಸ್ಫೋಟಕ ಬ್ಯಾಟ್ಸ್ ಮನ್‍ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಮುಂದಿನ 2016ರಿಂದಲೇ ಐಪಿಎಲ್ ಪಂದ್ಯಾವಳಿಗೆ ಬಹುಶಃ ಅಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸೋಮವಾರವಷ್ಟೇ ದ.ಆಫ್ರಿಕಾದ ದಿನಪತ್ರಿಕೆ `ರ್ಯಾಪರ್ಟ್' ಅತಿಯಾದ ಕ್ರಿಕೆಟ್‍ನಿಂದಾಗಿ ಎಬಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‍ನಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಐಪಿಎಲ್‍ನಂಥ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್‍ನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸ್ವತಃ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ನೇರಪ್ರಸಾರ ಸೂಪರ್ ಸ್ಪೋರ್ಟ್ ಹೇಳಿರುವಂತೆ, ``ಇಲ್ಲಿ ಹಲಬಗೆಯಲ್ಲಿ ಗಾಳಿ ಸುದ್ದಿಗಳು ಕೇಳಿಬರುತ್ತಿವೆ. ಕಳೆದ ಎರಡು ಮೂರು ವರ್ಷಗಳಲ್ಲಿ ತವರಿನಲ್ಲಿ ಹಾಗೂ ತವರಿನಾಚೆ ನನ್ನನ್ನು ನಾನು ಹೊಸ ಆಟಗಾರನಾಗಿ ಪ್ರತೀ ಪಂದ್ಯಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ ಎಂಬ ಮಾತು ಕೇಳಿಬರುತ್ತಿತ್ತು.
ಆದರೆ, ಒಂದೊಮ್ಮೆ ನಾನು ಐಪಿಎಲ್‍ನಲ್ಲಿ ಆಡುತ್ತಾ ಹೋದರೆ, ಅಂತ್ಯದಲ್ಲಿ ನಾನು ನಿಸ್ಸಂಶಯವಾಗಿ ಬಳಲುವುದರಲ್ಲಿ ಸಂಶಯವಿಲ್ಲ'' ಎಂದು 31 ವರ್ಷದ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆನ್ನಲಾಗಿದೆ.