ಭುವಿ ಕೂಡ ಅನುಮಾನ; ಬದಲಾವಣೆ ಅಗತ್ಯ

ಟೀಂ ಇಂಡಿಯಾದ ಕೆಲ ಹುಡುಗರನ್ನು ಬೆಂಬಿಡದೇ ಕಾಡುತ್ತಿರುವ ನಾನಾ ಬಗೆಯ ಗಾಯದ ಸಮಸ್ಯೆಗಳು ಈಗ ಮತ್ತೊಂದು...
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್

ನವದೆಹಲಿ/ಅಡಿಲೇಡ್: ಟೀಂ ಇಂಡಿಯಾದ ಕೆಲ ಹುಡುಗರನ್ನು ಬೆಂಬಿಡದೇ ಕಾಡುತ್ತಿರುವ ನಾನಾ ಬಗೆಯ ಗಾಯದ ಸಮಸ್ಯೆಗಳು ಈಗ ಮತ್ತೊಂದು ಆತಂಕ ಸೃಷ್ಟಿಮಾಡಿವೆ.
ಕೆಲ ದಿನಗಳ ಹಿಂದೆಯಷ್ಟೇ ತಂಡದ ಮುಂಚೂಣಿ ದಾಳಿಕಾರ ಇಶಾಂತ್ ಶರ್ಮಾ  ವಿಶ್ವಕಪ್ ನಲ್ಲಿ ಆಡುವುದು ಬಹುತೇಕ ಅಸಾಧ್ಯ ಎಂದು ವರದಿಯಾಗಿತ್ತು. ಈಗ ಮತ್ತೊಬ್ಬ ಪ್ರಮುಖ ಬೌಲಿಂಗ್ ಅಸ್ತ್ರ  ಭುವನೇಶ್ವರ್ ಕುಮಾರ್ ಸಹ ವಿಶ್ವಕಪ್‍ನಲ್ಲಿ ಆಡುವುದು ಅನುಮಾನ ಎನ್ನುವ ಸುದ್ದಿ ಆಘಾತ ತಂದಿದೆ. ಸದ್ಯ ಇಶಾಂತ್ ಮತ್ತು ಭುವನೇಶ್ವರ್ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಿಸಿಸಿಐ ನೀಡಿರುವ ಗಡುವಿನಂತೆ ಗಾಯದ ಪಟ್ಟಿ ಸೇರಿರುವ ಆಟಗಾರರು ಫೆ ಬ್ರವರಿ 7ರಂದು ತಮ್ಮ ದೈಹಿಕ ಸಕ್ಷಮತೆ ಸಾಬೀತುಪಡಿಸಬೇಕಾಗಿದೆ. ಭುವನೇಶ್ವರ್ ಮತ್ತು ಇಶಾಂತ್ ಮೇಲೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಪಾರ ನಂಬಿಕೆ ಇದೆ. ಆದರೆ, ಈ ಇಬ್ಬರೂ ಪ್ರಮುಖ ವೇಗಿಗಳು ತಂಡದಿಂದ ಹೊರಗುಳಿಯು ವಂತಾದರೆ, ತಂಡಕ್ಕೆ ದೊಡ್ಡ ನಷ್ಟವೇ ಸರಿ. ಹಾಗಾದಲ್ಲಿ ಮೋಹಿತ್  ಶರ್ಮಾಗೆ ಅವಕಾಶ ಸಿಗುವುದು ಹೆಚ್ಚು. ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮ  ಕೂಡ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬುದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ತಂಡದ ವ್ಯವಸ್ಥಾಪಕರ ಪ್ರಕಾರ ಕೆಲ ಆಟಗಾರರು ವಿಶ್ವಕಪ್‍ನಲ್ಲಿ ಆಡಲು ಸಮರ್ಥರಿಲ್ಲ. ಪ್ರತಿಷ್ಠಿತ ಈ ಪಂದ್ಯಾವಳಿ ಆರಂಭವಾಗುಷ್ಟರಲ್ಲಿ ಅವರು ಚೇತರಿಸಿ
ಕೊಳ್ಳುವುದು ಅನುಮಾನ. ಅವರನ್ನು ಬದಲಾಯಿಸಿ ಬೇರೆಯವರಿಗೆ ಅವಕಾಶ ನೀಡುವುದೇ ಸೂಕ್ತ ಎಂದು ಹೇಳಲಾಗಿದೆ.
ಹಾಗಾಗಿ, ಭಾರತ ತಂಡದಲ್ಲಿ ಕೆಲ ಬದಲಾವಣೆ ತರುವುದು ಅನಿವಾರ್ಯವಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಆದರೆ, ಅಡಿಲೇಡ್‍ನಲ್ಲಿ ತಂಡದ ಜೊತೆಗಿರುವ ವ್ಯವಸ್ಥಾಪಕರು ಇದನ್ನು ಅಲ್ಲಗಳೆದಿದ್ದು, ಬದಲಾವಣೆಯ ವಿಷಯ ಅಸಂಬದ್ಧ ಮತ್ತು ಊಹಾತ್ಮಕವಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.   ಆಟಗಾರರ ಫಿಟ್ನೆಸ್ ತಿಳಿದುಕೊಳ್ಳಬೇಕು. ತದನಂತರ ಅವರು ಫಿಟ್  ಆಗಿರದಿದ್ದರೆ, ಐಸಿಸಿಗೆ ಪೂರ್ಣ ವೈದ್ಯಕೀಯ ವರದಿ ಸಲ್ಲಿಸಿ, ಆ ಬಗ್ಗೆ ಮನದಟ್ಟು ಮಾಡಿಕೊಡ ಬೇಕು. ತದನಂತರವಷ್ಟೇ ಬದಲಾವಣೆಗೆ ಅನುಮತಿ ಸಿಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com