
ತಿರುವನಂತಪುರ: ಪ್ರಶಸ್ತಿ ಸುತ್ತಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾದ ಕರ್ನಾಟಕ ಮಹಿಳಾ ನೆಟ್‍ಬಾಲ್ ತಂಡದ ಆಟಗಾರ್ತಿಯರು 35ನೇ ರಾಷ್ಟ್ರೀಯ
ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಗುರುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ವನಿತೆಯರು 38:53 ಅಂಕಗಳ ಅಂತರದಲ್ಲಿ ಹರ್ಯಾಣ ತಂಡದ ವಿರುದ್ಧ ಮುಗ್ಗರಿಸಿದರು. ಇನ್ನು ಸಂಘಟಿತ ಪ್ರದರ್ಶನ ತೋರಿದ ಹರ್ಯಾಣ ಚಿನ್ನದ ಪದಕ ಪಡೆಯಿತು.
ಕ್ರೀಡಾಕೂಟದ ಐದನೇ ದಿನ ರಾಜ್ಯದ ರೋಯಿಂಗ್, ಈಜು, ವೇಟ್‍ಲಿಫ್ಟಿಂಗ್ ಕ್ರೀಡಾ ಳುಗಳು ಉತ್ತಮ ಪ್ರದರ್ಶನ ನೀಡಿ 4 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 8 ಪದಕ ತಂದಿದ್ದಾರೆ. ಈ ಮೂಲಕ ಕರ್ನಾಟಕ 2 ಚಿನ್ನ, 11 ಬೆಳ್ಳಿ, 10 ಕಂಚು ಸೇರಿದಂತೆ 23 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದೆ.
ಮಹಿಳೆಯರ ವೇಟ್‍ವೇಟ್‍ಲಿಫ್ಟಿಂಗ್ ನಲ್ಲಿ ಕರ್ನಾಟಕದ ಕಾಂಚನ್ ಪರಾಶ್ರಮï ಮುನ್ನೊಲ್ಕರ್ ಕಂಚು ಪಡೆದರು. ವನಿತೆಯರ 75ಕ್ಕೂ ಹೆಚ್ಚು ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಾಂಚನ್ ಪದಕ ಪಡೆದರು.
ರೋಯಿಂಗ್ ನಲ್ಲಿ 2ಬೆಳ್ಳಿ, 2 ಕಂಚು: ಕರ್ನಾಟಕದ ರೋಯಿಂಗ್‍ಪಟುಗಳು ಕ್ರೀಡಾಕೂಟದಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಿದ್ದು, ಐದನೇ ದಿನ 2 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದಿದ್ದಾರೆ. ಪುರುಷರ ಕಾಕ್ಸ್‍ಡ್ ಎಯ್ಟ್ 500 ಮೀ. ವಿಭಾಗದಲ್ಲಿ ಕರ್ನಾಟಕ ರೋಯಿಂಗ್ ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಪಡೆಯಿತು. ಈ ತಂಡದಲ್ಲಿ ಸೋಜನ್ ಮ್ಯಾಥ್ಯೂ, ಅಜಯ್ ಸಿಂಗ್, ಬಿನೆಶ್ ಕುನ್ನುಮಲ್, ಬಿಂಟೊ ಥಾಮಸ್ ಆ್ಯಂಟೊ,ಕ್ಷಿತಿಜ್ ಸುಮಂತ್, ಲಕ್ಷ್ಮ ಣ್ ಕಲಿಯಪ್ಪನ್, ನವೀನ್ ಕರುಜುಗುಟ್ಟಾ, ರೋಶನ್, ಸತೀಶ್ ಪಾಟೀಲ್ ಭಾಗವಹಿಸಿದ್ದರು.
ಇನ್ನು ಪುರುಷರ ಕಾಕ್ಸ್‍ಲೆಸ್ ಫೋರ್ 500 ಮೀ. ವಿಭಾಗದಲ್ಲೂ ರಾಜ್ಯ ತಂಡ ಬೆಳ್ಳಿ ಪದಕ ಸಂಪಾದಿಸಿದೆ. ಸೋಜನ್ ಮ್ಯಾಥ್ಯೂ, ಅಜಯ್ ಸಿಂಗ್, ಲಕ್ಷ್ಮ ಣ್ ಕಲಿಯಪ್ಪನ್, ಬಿಂಟೊ ಥಾಮಸ್ ಆ್ಯಂಟೊ ಈ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರು. ರೋಯಿಂಗ್‍ನಲ್ಲಿ ಕರ್ನಾಟಕದ ಇಬ್ಬರು ಕ್ರೀಡಾಪಟುಗಳು ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಪುರುಷರ ಲೈಟ್‍ವೇಟ್ ಡಬಲ್ ಸ್ಕಲ್ 500 ಮೀ. ವಿಭಾಗದಲ್ಲಿ ಫೈ ಸಲ್ ಮೊಹಮದ್ ಅಲಿ, ಹಾಗೂ ಇದೇ ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಬಿಜೇಶ್ ಕುಮಾರ್ ಕಂಚಿನ ಪದಕ ಪಡೆದರು. ಇನ್ನು ರಾಜ್ಯದ ಭರವಸೆಯ ಈಜುಪಟು ಅರವಿಂದ್ ಎಂ, 100 ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಜಿತುಗೆ 2 ಚಿನ್ನ: ಭಾರತದ ಶೂಟಿಂಗ್ ತಾರೆ ಜಿತು ರೈ 2 ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಗುರುವಾರ ನಡೆದ 10ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ಜಿತುರೈ, ಗುರ್‍ಪ್ರೀತ್ ಸಿಂಗ್ ಮತ್ತು ಓಂಕಾರ್ ಜತೆಗೂಡಿ ಒಟ್ಟು 1724 ಅಂಕಗಳನ್ನು ಕಲೆಹಾಕುವ ಮೂಲಕ ಚಿನ್ನದ ಪದಕ ಪಡೆದರು. ಇನ್ನು ಇದೇ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ 200.9 ಅಂಕಗಳನ್ನು ಸಂಪಾದಿಸಿ ಮತ್ತೊಂದು ಚಿನ್ನ ಬಾಚಿಕೊಂಡರು. ತಂಡಗಳ ವಿಭಾಗದಲ್ಲಿ ಚಿನ್ನ ಗೆದ್ದಾಗಲೇ ಜಿತು ಹ್ಯಾಟ್ರಿಕ್ ಸ್ವರ್ಣ ಪದಕದ ಸಾಧನೆ ಮಾಡಿದರು. ಇನ್ನು ಮಾಜಿ ವಿಶ್ವಕಪ್ ವಿಜೇತ ರಂಜನ್ ಸೋಧಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅಂಕಪಟ್ಟಿಯಲ್ಲಿ ಸರ್ವೀಸಸ್ ಮತ್ತು ಹರ್ಯಾಣ ನಡುವೆ ತೀವ್ರ ಪೈಪೋ ಟಿ ಮುಂದುವರಿದಿದ್ದು, 29 ಚಿನ್ನ, 10 ಬೆಳ್ಳಿ, 10 ಕಂಚು ಸೇರಿದಂತೆ 49 ಪದಕ ಸಂಪಾದಿಸಿರುವ ಸರ್ವೀಸಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಹ್ಯಾಟ್ರಿಕ್ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಹಾಕಿದೆ.
ಇನ್ನು ತೀವ್ರ ಪೈಪೋಟಿ ನೀಡುತ್ತಿರುವ ಹರ್ಯಾಣ 25 ಚಿನ್ನ, 11 ಬೆಳ್ಳಿ, 6 ಕಂಚು ಸೇರಿದಂತೆ ಒಟ್ಟು 42 ಪದಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನದ ಮಹಿಳಾ ಶೂಟರ್ ಶಗುನ್ ಚೌಧರಿ ಮಹಿಳೆಯರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ 93.0 ಅಂಕಗಳನ್ನು ಸಂಪಾದಿಸುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ .
Advertisement