ಕ್ರಿಕೆಟ್‍ಗೆ ಕಳೆಕಟ್ಟಿದ ಕಾಮೆಂಟರಿ

ಕ್ರಿಕೆಟ್ ಅನ್ನು ಕಾಮೆಂಟರಿ ಮೂಲಕವೇ ತಿಳಿಯುವ ಕಾಲವೊಂದಿತ್ತು. ಅದು 70ರ ಅಥವಾ 80ರ ದಶಕ. ದೂರ ದೇಶಗಳಲ್ಲಿ ನಡೆಯುವ...
ಕ್ರಿಕೆಟ್ ಕಾಮೆಂಟರಿ
ಕ್ರಿಕೆಟ್ ಕಾಮೆಂಟರಿ

ಕ್ರಿಕೆಟ್ ಅನ್ನು ಕಾಮೆಂಟರಿ ಮೂಲಕವೇ ತಿಳಿಯುವ ಕಾಲವೊಂದಿತ್ತು. ಅದು 70ರ ಅಥವಾ 80ರ ದಶಕ. ದೂರ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ಬಗ್ಗೆ
ತಿಳಿದುಕೊಳ್ಳಬೇಕೆಂದರೆ ಕ್ರಿಕೆಟ್ ಅಭಿಮಾನಿಗಳಿಗಿದ್ದ ಏಕೈಕ ಆಸರೆ ಎಂದರೆ ಅದು ರೇಡಿಯೋ.  ಪಾರ್ಕ್‍ಗಳಲ್ಲಿ, ಬೀದಿ ಬೀದಿಗಳಲ್ಲಿ ಆಗ ಟ್ರಾನ್ಸಿಸ್ಟರ್ ಎಂದು ಕರೆಯಲ್ಪಡುತ್ತಿದ್ದ ಮಿನಿ ರೇಡಿಯೋ ಗಳನ್ನು ಒಂದು ಕೈಯಲ್ಲಿ ಹಿಡಿದು, ಕಿವಿಗೆ ತಾಗಿಸಿಕೊಂಡು ಓಡಾಡುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಸರ್ವೇ ಸಾಮಾನ್ಯವಾಗಿ ಹಾದಿ ಬೀದಿಗಳಲ್ಲಿ ಕಾಣಸಿಗುತ್ತಿದ್ದರು. ಕ್ಲಾಸ್ ರೂಂಗಳಲ್ಲೂ ಕದ್ದು ಕ್ರಿಕೆಟ್ ಕಾಮೆಂಟರಿ ಕೇಳುವ ಚಟ ಹಲವು ಹುಡುಗರಿಗೆ ಗೀಳಾಗಿ ಪರಿಣಮಿಸಿತ್ತು. ಇನ್ನು ಸಿಟಿ ಬಸ್ಸುಗಳಲ್ಲಿ ಸೀಟು ಸಿಗದಿದ್ದರೂ ಕಿವಿಗೆ ರೇಡಿಯೋ  ಅಂಟಿಸಿಕೊಂಡವರಂತೆ ನಿಂತು ತೂಗಾಡುತ್ತಾ ಸ್ಕೋರು ಕೇಳುತ್ತಿದ್ದವರ ಸಂಖ್ಯೆಯೇ ನೂ ಕಡಿಮೆ ಇರುತ್ತಿರಲಿಲ್ಲ. ಅದೇ ಆಗಿನ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರಕ್ಕೆ ಇದ್ದ ಆಧಾರ !

ಅದು ಬಿಟ್ಟರೆ, ದಿನಪತ್ರಿಕೆಗಳು. ಆದರೆ, 90ರ ದಶಕದ ಆರಂಭ ಹೊಸತೊಂದು ಶಕೆಗೆ ನಾಂದಿ ಹಾಡಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಮುನ್ನವೇ ಟಿವಿ ರಿಲೇ ಇದ್ದವು. ಭಾರತದಲ್ಲಿ ಈ ಹೊಸ ಸಂಪ್ರದಾಯ ಆರಂಭಗೊಂಡಿದ್ದು 90ರ ದಶಕದಲ್ಲಿ. ಈ ಹೊಸ ಶಕೆಯಲ್ಲಿ ಮೂಡಿ ಬಂದ ಅನೇಕ ಬದಲಾವಣೆಗಳು ಕ್ರಿಕೆಟನ್ನು ತನ್ನ ಅಭಿಮಾನಿಗಳಿಗೆ ಹೆಚ್ಚೆಚ್ಚು ಹೊಸದಾಗಿ ತಂದು ಉಣಬಡಿಸುವುದರಲ್ಲಿ ಹೊಸ ಹೊಸ ಆಯಾಮಗಳನ್ನು ಸಷ್ಟಿಸಿದವು. ಥ್ಯಾಂಕ್ಸ್  ಟು ಜಾನ್ ಲೊಗಿ ಬೆಯರ್ಡ್. ಈತ ಟೆಲಿವಿಷನ್ ಅನ್ನೋ ಮಾಯಾ ಪೆಟ್ಟಿಗೆಯನ್ನು ತಯಾರಿಸದೇ ಇದ್ದಿದ್ದರೆ ಇಂದು ಮನರಂಜನೆಯ ಮತ್ತೊಂದು ಹೆಸರು ಎಂಬಂತಾಗಿರುವ ಟಿವಿ ಅನ್ನೋ ಶಬ್ದವೇ ನಮ್ಮ ಮನೆಗಳಲ್ಲಿ, ಜೀವನಗಳಲ್ಲಿ ಇರುತ್ತಿರಲಿಲ್ಲವೇನೋ!
ವಿಶ್ವಕಪ್ ಪಂದ್ಯಾವಳಿಗಳು ಜನರನ್ನು ತಮ್ಮತ್ತ ಸೆಳೆದ ನಂತರ, ಕ್ರಿಕೆಟ್‍ನ ಜನಪ್ರಿಯತೆ ಮತ್ತಷ್ಟು ವೃದ್ಧಿಸಿದೆ. ಕಾಮೆಂಟರಿ ಬರೀ ಕೇಳೋದಲ್ಲ, ಮನೆಗಳಲ್ಲಿಯೇ  ಪಂದ್ಯಗಳನ್ನು ನೋಡುತ್ತಾ ಆಲಿಸುವುದು ಎಂಬ ಹೊಸ ಅನುಭೂತಿಯನ್ನು ನೀಡಿದವು. ಟಿವಿಗಳಲ್ಲಿ ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಆರಂಭವಾದಾಗ ರೇಡಿಯೋ ಗಳಲ್ಲಿ ಬಂದಂತೆಯೇ  ಕಾಮೆಂಟರಿ ಟಿವಿಗಳಲ್ಲೂ ಬರುತ್ತಿದ್ದವು. ಈಗಿನ ಟಿವಿ ಕಾಮೆಂಟರಿಗಳಿಗೂ ಹಿಂದಿನ ಟಿವಿ ಕಾಮೆಂಟರಿಗಳಿಗೂ ವ್ಯತ್ಯಾಸವಿರುತ್ತಿತ್ತು. ಕಾಮೆಂಟರಿ ನೀಡುವವರನ್ನು ತೋರಿಸುತ್ತಿರಲಿಲ್ಲ. ಕಾಮೆಂಟರಿಯಲ್ಲಿ ಹಿರಿಯ, ನಿವೃತ್ತ ಕ್ರಿಕೆಟ್ ಆಟಗಾರರು ಬರುತ್ತಿರಲಿಲ್ಲ. ಹಾಗೆ ಬಂದು ತಮ್ಮ ಅಬಿsಪ್ರಾಯಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಅಲ್ಲದೆ, ಕಾಮೆಂಟರಿಗೆ ಗ್ರಾಫಿಕ್ಸ್ ಇನ್ನಿತರ ಪಂದ್ಯಕ್ಕೆ ಆಟಗಾರರಿಗೆ ಸಂಬಂಧಪಟ್ಟ ಅಂಕಿ-ಅಂಶಗಳ ಇಂಬು ಇರುತ್ತಿರಲಿಲ್ಲ. ಆದರೆ, 90ರ ದಶಕದಲ್ಲಿ ನಡೆದ ಕ್ರಾಂತಿ, ಕಾಮೆಂಟರಿಗೂ ಹೊಸ ಸ್ಪರ್ಶ ನೀಡಿತು. ಪಂದ್ಯದ ಪ್ರಸಾರ ಹಕ್ಕುಗಳನ್ನು ಪಡೆಯುತ್ತಿದ್ದ ವಿವಿಧ ಟಿವಿ ವಾಹಿನಿಗಳು, ತಮ್ಮದೇ ಒಂದು ಕಾಮೆಂಟರಿ ತಂಡವನ್ನಿಟ್ಟುಕೊಂಡು ಪಂದ್ಯಗಳನ್ನು ನಿರೂಪಿಸಲು ಆರಂಬಿsಸಿದವು. ಆಗ, ರೆಗ್ಯುಲರ್ ಕಾಮೆಂಟೇಟರ್‍ಗಳ (ವೀಕ್ಷಕ ವಿವರಣೆಗಾರ) ಜೊತೆಗೆ ಹಿರಿಯ, ನಿವೃತ್ತ, ಕೆಲವೊಮ್ಮೆ ಹಾಲಿ ಕ್ರಿಕೆಟಿಗರನ್ನು ಕಾಮೆಂಟರಿ ಬಾಕ್ಸ್ ನಲ್ಲಿ ಆಹ್ವಾನಿಸಿ ಕಾಮೆಂಟರಿ ನೀಡುವ ಹೊಸ ಸಂಪ್ರದಾಯ ಶುರುವಾಯಿತು. ಇದರೊಂದಿಗೆ, ಎಕ್ಸ್ ಟ್ರಾ ಇನ್ನಿಂಗ್ಸ್ ರೂಪದಲ್ಲಿ ಪಂದ್ಯದ ಬಗ್ಗೆ ಹೆಚ್ಚೆಚ್ಚು ಮಾಹಿತಿ ನೀಡುವ ಸಂಪ್ರದಾಯವೂ ಶುರುವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com