
ಮೆಲ್ಬರ್ನ್: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಚರ್ಚಿಸಲು ಕರೆಯಲಾಗುವ ಯಾವುದೇ ಸಭೆಗಳಿಗೆ ತಂಡದ ಮುಖ್ಯ ಕೋಚ್ ಡಂಕನ್ ಫ್ಲೆಚರ್ ಭಾಗವಹಿಸುತ್ತಿಲ್ಲ ಎಂಬ ಆರೋಪಗಳು ಎದ್ದಿವೆ.
ಅತಿ ಮಹತ್ವದ ಸಭೆಗಳಿಗೆ ಹಾಜರಾಗದೇ ದೂರ ಉಳಿಯುತ್ತಿರುವ ಡಂಕನ್, ತಂಡಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಟೀಕೆಗಳು ಹರಿದಾಡುತ್ತಿವೆ.
ಏಕೆ ಆರೋಪ?
ಬುಧವಾರ ಟೀಂ ಇಂಡಿಯಾ ಎಂದಿನಂತೆ ತನ್ನ ಅಭ್ಯಾಸ ನಡೆಸಿತ್ತು. ಆದರೆ, ತಂಡ ತಂಗಿರುವ ಹೋಟೆಲ್ `ಲ್ಯಾಂಗ್‍ಹ್ಯಾಮ್ ನಲ್ಲಿ ತಂಡದ ನಿರ್ದೇಶಕ ರವಿಶಾಸ್ತ್ರಿ ಹಾಗೂ ಇನ್ನಿತರ ತಂಡದ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿದರು. ಈ ಸಭೆಗೆ ಫ್ಲೆಚರ್ ಹಾಜರಾಗಿರಲಿಲ್ಲ. ಡಂಕನ್ ಅವರಿಗೆ ಈ ಸಭೆಯ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ ಎಂದೂ ಹೇಳಲಾಗುತ್ತಿದೆ. ಇದರಿಂದ, ಟೀಂ ಇಂಡಿಯಾದ ಆಡಳಿತ ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ.
ನಿರಾಕರಣೆ
ಡಂಕನ್ ವಿರುದ್ಧ ಎದ್ದಿರುವ ಆರೋಪಗಳನ್ನು ಬಿಸಿಸಿಐ ತಳ್ಳಿ ಹಾಕಿದೆ. ಇತ್ತ, ಈ ಬಗ್ಗೆ ಹೇಳಿಕೆ ನೀಡಲಾಗಿರುವ ತಂಡದ ಮಾಧ್ಯಮ ವ್ಯವಸ್ಥಾಪಕ ಡಾ. ಆರ್.ಎನ್.ಬಾಬಾ, ತಂಡದ ನಿರ್ದೇಶಕ ರವಿಶಾಸ್ತ್ರಿ ನೇತೃತ್ವದಲ್ಲಿ ಯಾವುದೇ ಸಭೆ ನಡೆದಿಲ್ಲ. ಅಲ್ಲದೆ, ಡಂಕನ್ ಅವರು ತಂಡಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎನ್ನುವುದು ತಪ್ಪು ಮಾಹಿತಿ. ಆ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವು' ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement