
ನವದೆಹಲಿ: ರಾಂಚಿ ರೇಸ್ ಹಾಗೂ ಪಂಜಾಬ್ ವಾರಿಯರ್ಸ್ ತಂಡಗಳು ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್‍ಐಎಲ್) ಪಂದ್ಯಾವಳಿಯ ಫೈನಲ್ ತಲುಪಿವೆ.
ಶನಿವಾರ ನಡೆದ ಮೊದಲ ಸೆಮಿಫೈನಲ್‍ನಲ್ಲಿ ರಾಂಚಿ ತಂಡ, ಉತ್ತರ ಪ್ರದೇಶ ವಿಜಾರ್ಡ್ಸ್ ತಂಡದ ವಿರುದಟಛಿ ಜಯ ಸಾಧಿಸಿದರೆ, ಎರಡನೇ ಸೆಮಿ ಫೈನಲ್‍ನಲ್ಲಿ ಪಂಜಾಬ್ ವಾರಿಯರ್ಸ್ ತಂಡವು, ಹಾಲಿ ಚಾಂಪಿಯನ್ ಡೆಲ್ಲಿ ವೇವ್ ರೈಡರ್ಸ್ ತಂಡವನ್ನು ಮಣಿಸಿತು. ಇತ್ತಂಡಗಳ ನಡುವಿನ ಫೈನಲ್ ಭಾನುವಾರ (ಫೆ. 22) ರಂದು ದೆಹಲಿಯಲ್ಲಿ ನಡೆಯಲಿದೆ. ಡೆಲ್ಲಿ ವೇವ್ ರೈಡರ್ಸ್ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ 3ನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ.
ರಾಂಚಿಗೆ ರೋಚಕ ಗೆಲವು
ಶೂಟೌಟ್‍ನಲ್ಲಿ ರೋಚಕ ಪೈಪೋಟಿಯ ನಡುವೆಯೂ ಉತ್ತಮ ನಿಯಂತ್ರಣ ಸಾಧಿಸಿದ ರಾಂಚಿ ರೇಸ್ ತಂಡ, ಹಾಕಿ ಇಂಡಿಯಾ ಲೀಗ್ ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಉತ್ತರ ಪ್ರದೇಶ ವಿಜಾರ್ಡ್ಸ್ ವಿರುದ್ಧ ಗೆಲವು ದಾಖಲಿಸಿತು. ರಾಂಚಿ ಹಾಗೂ ಉತ್ತರ ಪ್ರದೇಶ ತಂಡಗಳು ನಿಗದಿತ ಸಮಯದಲ್ಲಿ 1-1ರ ಸಮಬಲ ಸಾಧಿಸಿದ್ದವು. ಹಾಗಾಗಿ
ಪಂದ್ಯದಲ್ಲಿ ಶೂಟೌಟ್ ಮೊರೆ ಹೋಗಲಾಯಿತು. ಈ ವೇಳೆ ತೀವ್ರ ಹಣಾಹಣಿ ಏರ್ಪಟ್ಟರೂ ಅಂತಿಮವಾಗಿ ರಾಂಚಿ ರೇಸ್ ತಂಡ ಶೂಟೌಟ್‍ನಲ್ಲಿ 9--8 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಆ ಮೂಲಕ 10-9 ರಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಪರಸ್ಪರ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಪಂದ್ಯದ 35ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಉತ್ತರ ಪ್ರದೇಶ ತಂಡದ ವಿ.ಆರ್ ರಘುನಾಥ್ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ನಂತರದ ನಿಮಿಷದಲ್ಲಿ ರಾಂಚಿ ರೇಸ್ ತೀವ್ರ ಹೋರಾಟ ನೀಡಿತು. ಫಲವಾಗಿ 43ನೇ ನಿಮಿಷದಲ್ಲಿ ರಾಂಚಿ ತಂಡದ ಆ್ಯಶ್ಲೆ ಜಾಕ್ಸನ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ತಂಡ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು.
ನಂತರದ ಹಂತದಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರೂ ಗೋಲು ದಾಖಲಾಗಲಿಲ್ಲ. ಪಂದ್ಯದಲ್ಲಿ ಉಭಯರು 1-1 ಗೋಲುಗಳ ಅಂತರದಲ್ಲಿ ಡ್ರಾ
ಸಾಧಿಸಿದ್ದರಿಂದ ಫಲಿತಾಂಶ ಪಡೆಯಲು ಶೂಟೌಟ್ ಮೊರೆ ಹೋಗಲಾಯಿತು. ಈ ಹಂತದಲ್ಲೂ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು. ಅಂತಿಮ ಹಂತದಲ್ಲಿ ವಿಜಾರ್ಡ್ಸ್ ಅವಕಾಶ ಕೈಚೆಲ್ಲಿತು. ಇದರಿಂದ ರಾಂಚಿ ಲಾಭ ಪಡೆದು ಗೆಲವು ದಾಖಲಿಸಿತು. ಉತ್ತರ ಪ್ರದೇಶದ ಪರ ಶೂಟೌಟ್ ನಲ್ಲಿ ಜೆರೋನ್ ಹರ್ಟ್ಸ್ ಬರ್ಗರ್ 3, ಅಲೆಗ್ಸಾಂಡರ್ ಬ್ರಾಟ್ 2, ಎಸ್ ಕೆ ಉತ್ತಪ್ಪ 1, ಬಾಬ್ ಡಿ ವುಗ್ಡ್ 1, ರಮಣ್‍ದೀಪ್ ಸಿಂಗ್ 1 ಗೋಲು ದಾಖಲಿಸಿದರು.
ಇನ್ನು ರಾಂಚಿ ತಂಡದ ಪರ ಆ್ಯಶ್ಲೆ ಜಾಕ್ಸನ್ 3, ಡೇನಿಯಲ್ ಬೇಲ್ 3, ಬ್ಯಾರಿ ಮಿಡಲ್ಟನ್ 2, ಬಿರೇಂದರ್ ಲಕ್ರಾ 1 ಗೋಲು ದಾಖಲಿಸಿದರು. ಉತ್ತರ ಪ್ರದೇಶ ತಂಡದ ಪರ ಅಲೆಕ್ಸಾಂಡರ್ ಬ್ರಾಟ್ ಅವರ ಪ್ರಯತ್ನವನ್ನು ಅಂತಿಮ ಹಂತದಲ್ಲಿ ವಿಫಲಗೊಳಿಸಿದ ರಾಂಚಿ ತಂಡದ ಗೋಲ್ ಕೀಪರ್ ಟೈಲರ್ ಲೊವೆಲ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂಜಾಬ್ ಫೈನಲ್‍ಗೆ
ಶನಿವಾರ ನಡೆದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಪಂಜಾಬ್ ವಾರಿಯರ್ಸ್ ತಂಡ, ಹಾಲಿ ಚಾಂಪಿಯನ್ ಡೆಲ್ಲಿ ವೇವ್ ರೈಡರ್ಸ್ ವಿರುದ್ಧ 2-0 ಗೋಲುಗಳಿಂದ ಗೆಲವು ದಾಖಲಿಸಿ, ಫೈನಲ್ ಪ್ರವೇಶಿಸಿತು. 4ನೇ ನಿಮಿಷದಲ್ಲಿ ಸಂದೀಪ್, 36ನೇ ನಿಮಿಷದಲ್ಲಿ ಮಜಾಲಿ ಗೋಲು ದಾಖಲಿಸಿದರು.
Advertisement