
ದೆಹಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮದೇವ್ ದೇವವರ್ಮನ್ ದೆಹಲಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆ ಮೂಲಕ ಹಾಲಿ ಚಾಂಪಿಯನ್ ಘನತೆಯನ್ನು ಮುಂದುವರೆಸಿದ್ದಾರೆ.
ಭಾನುವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೋಮದೇವ್, 3-6, 6-4, 6-0 ಸೆಟ್‌ಗಳಿಂದ ತಮ್ಮದೇ ದೇಶದ ಯುಕಿ ಭಾಂಬ್ರಿ ಅವರನ್ನು ಪರಾಭವಗೊಳಿಸಿ ಈ ಸಾಧನೆ ಮಾಡಿದರು. ಕಳೆದ ವರ್ಷ ಇದೇ ಟೂರ್ನಿಯಲ್ಲಿ ಪ್ರಶಸ್ತಿಯ ಗಡಿ ಮೂಡಿಸಿಕೊಂಡಿದ್ದ ಸೋಮದೇವ್, ಇಲ್ಲಿಯೂ ಆ ಸಾಧನೆ ಮಾಡುವಲ್ಲಿ ಹಿಂದೆ ಬೀಳಲಿಲ್ಲ.
ಸುಮಾರು ಎರಡೂವರೆ ಗಂಟೆ ಕಾಲ ನಡೆದ ಪಂದ್ಯದಲ್ಲಿ ಸೋಮದೇವ್ ಮುಂದೆ ಯುಕಿ ಭಾಂಬ್ರಿ ಕಠಿಣ ಸವಾಲುಗಳನ್ನೇ ನಿಲ್ಲಿಸಿದ್ದರು. ಮೊದಲ ಸೆಟ್ ಅನ್ನು ವಶಕ್ಕೆ ತೆಗೆದುಕೊಂಡಿದ್ದ ಯುಕಿ, ಎರಡನೇ ಸೆಟ್‌ನಲ್ಲಿ ಸಹ ಆರಂಭದಲ್ಲಿ 2-0ಯಿಂದ ಮುಂದೆ ಸಾಗಿದ್ದರು. ಆದರೆ, ನಂತರದಲ್ಲಿ ಚೇತರಿಸಿಕೊಂಡ ಸೋಮದೇವ್, ಅದ್ಬುತ ಲಯ ತೋರುವ ಮೂಲಕ ಮೈ ಕೊಡವಿ ಮೇಲೆದ್ದು ಬಂದು ಪ್ರಶಸ್ತಿ ಗೆದ್ದರು.
Advertisement